ತುಮಕೂರು: ಜಾತಿಗಣತಿ ವರದಿ ಅನುಷ್ಠಾನಕ್ಕೆ ತರುವ ವಿಚಾರದ ಕುರಿತು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಎಸ್‌ಆರ್ ಶ್ರೀನಿವಾಸ್ ವಿರೋಧ ವ್ಯಕ್ತಪಡಿಸಿದ್ದಾರೆ.
ಗುಬ್ಬಿ ಶಾಸಕ ಎಸ್‌ಆರ್ ಶ್ರೀನಿವಾಸ್ ಜಾತಿಗಣತಿ ಅನುಷ್ಠಾನ ವಿರೋಧಿಸಿದ್ದು, ವರದಿಯ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ನಂತರ ಕ್ಯಾಬಿನೆಟ್‌ಗೆ ತರಲಿ ಎಂದು ಹೇಳಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಇದು ಅವೈಜ್ಞಾನಿಕ ಜಾತಿಗಣತಿ. ಎಲ್ಲಾ ಸಮುದಾಯಕ್ಕೂ ಸಾಮಾಜಿಕ, ಶೈಕ್ಷಣಿಕ ನ್ಯಾಯ ಸಿಗಬೇಕು. ಆ ರೀತಿಯಲ್ಲಿ ವರದಿಯನ್ನು ಮತ್ತೊಮ್ಮೆ ತಯಾರಿಸಿ ಬಿಡುಗಡೆ ಮಾಡಲಿ ಎಂದರು.
ನಾನು ಹಿಂದೆ ಇದರ ಬಗ್ಗೆ ಪ್ರಸ್ತಾಪ ಮಾಡಿದ್ದೆ. ನಮ್ಮ ಒಕ್ಕಲಿಗರಲ್ಲಿ ಒಳಪಂಗಡಗಳು ಇವೆ. ಲಿಂಗಾಯತರಲ್ಲೂ ಒಳಪಂಗಡಗಳು ಇವೆ. ಕುಂಚಿಟಿಗರು ಕೇವಲ ಕುಂಚಿಟಿಗ ಅಂತ ಬರೆದಿರುತ್ತಾರೆ. ನಮ್ಮಲ್ಲಿ ಕುಂಚಿಟಿಗ ಒಕ್ಕಲಿಗ ಅಂತ ಬರೆದಿರಲ್ಲ. ಸರ್ಪ ಒಕ್ಕಲಿಗರು ಇದ್ದಾಗ ಕೇವಲ ಸರ್ಪರು ಅಂತ ಬರೆಯುತ್ತಾರೆ. ಅದ್ಯಾವುದು ಕೂಡ ಆಗ ನಮ್ಮ ಸಮುದಾಯದ ಪಟ್ಟಿಯಲ್ಲಿ ಬರಲ್ಲ. ಇವರು ವರದಿ ತಯಾರು ಮಾಡಿದವರು ಕೂಡಾ ಕುಂಚಿಟಿಗ ಅಂತ ಬರೆದುಕೊಂಡು ಹೋಗಿರುತ್ತಾರೆ. ನಮ್ಮಲ್ಲಿ ವಿರೋಧ ಯಾಕೆ ಅಂದರೆ ಒಟ್ಟಿಗೆ ಒಕ್ಕಲಿಗ ಅಂತ ಮಾಡಲಿ ಅಂತ. ಲಿಂಗಾಯತ ಸಮುದಾಯದಲ್ಲೂ ಸಹ ಅದೇ ರೀತಿ ಆಗಿರಬಹುದು. ಅವರಲ್ಲಿಯೂ ಅನೇಕ ಒಳಪಂಗಡಗಳು ಇವೆ. ಆದ್ದರಿಂದ ಅದನ್ನು ಸರಿಯಾದ ರೀತಿಯಲ್ಲಿ ಮಾಡಿದ್ದಾರಾ ಅನ್ನೋ ಅನುಮಾನ ಇದೆ. ಮಾಡದೇ ಇದ್ದಾಗ ಜನಾಂಗಕ್ಕೆ ಅನ್ಯಾಯ ಆಗುತ್ತೆ ಅನ್ನುವ ಕಳಕಳಿ ಎಲ್ಲರಲ್ಲಿ ಇದೆ. ಆ ದೃಷ್ಟಿ ಇಟ್ಟುಕೊಂಡು ಈ ಸಮುದಾಯಗಳು ವಿರೋಧ ವ್ಯಕ್ತಪಡಿಸ್ತಿದ್ದಾರೆ ಅಂತ ನನಗೆ ಅನಿಸುತ್ತಿದೆ. ವರದಿ ಯಾವ ರೀತಿ ತಯಾರು ಮಾಡಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ಇದುವರೆಗೂ ಯಾರಿಗೂ ಗೊತ್ತಿಲ್ಲ. ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆ ರೀತಿಯಾದರೇ ಅನ್ಯಾಯ ಆಗುತ್ತದೆ ಎಂದರು.
Post a comment
Log in to write reviews