
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ನಿರ್ಣಾಯಕ ಜನಮತ ಪಡೆಯಲಿದ್ದು, ಫಲಿತಾಂಶ ಪ್ರಕಟವಾದ 48 ಗಂಟೆಗಳಲ್ಲಿ ಪ್ರಧಾನಿಯನ್ನು ಆಯ್ಕೆ ಮಾಡಲಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ಮೈತ್ರಿಕೂಟ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಹಾಗಾಗಿ ಪಕ್ಷ ಸ್ವಾಭಾವಿಕವಾಗಿ ನಾಯಕತ್ವ ವಹಿಸಿಕೊಳ್ಳುತ್ತದೆ ಎಂದಿದ್ದಾರೆ.
ಸರಳ ಬಹುಮತಕ್ಕೆ ಅಗತ್ಯವಾಗಿರುವ 272ಕ್ಕಿಂತ ಅಧಿಕ ಸ್ಥಾನಗಳಲ್ಲಿ ಇಂಡಿಯಾ ಒಕ್ಕೂಟ ಗೆಲುವು ಕಾಣಲಿದೆ. ಅಷ್ಟೇ ಅಲ್ಲ, ಎನ್‌ಡಿಎ ಮೈತ್ರಿಕೂಟದ ಕೆಲ ಪಕ್ಷಗಳು ನಮ್ಮೊಂದಿಗೆ ಬರಲಿವೆ. ಅವರನ್ನು ಇಂಡಿಯಾ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.
'ಭಾರತ ಪ್ರಕಾಶಿಸುತ್ತಿದೆ' ಎಂದು 2004ರಲ್ಲಿ ಬಿಜೆಪಿ ಪ್ರಚಾರ ಮಾಡಿದ್ದರೂ ಕಾಂಗ್ರೆಸ್ ಗೆಲುವು ಸಾಧಿಸಿತ್ತು. 2024ರಲ್ಲೂ 2004ರ ಫಲಿತಾಂಶ ಪುನರಾವರ್ತನೆಯಾಗಲಿದೆ. ನಮಗೆ ದೊಡ್ಡ ಗೆಲುವು ಸಿಗಲಿದೆ. ಬಿಜೆಪಿ 2019ಕ್ಕಿಂತ ಕಡಿಮೆ ಸ್ಥಾನಗಳಿಸಲಿದೆ. ರಾಜಸ್ಥಾನ, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸ್ಥಾನಗಳು ಹೆಚ್ಚಲಿವೆ. ಉತ್ತರ ಪ್ರದೇಶದಲ್ಲೂ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಕಾಂಗ್ರೆಸ್ ಗಳಿಸಲಿದೆ ಎಂದು ಜೈರಾಮ್ ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.
Poll (Public Option)

Post a comment
Log in to write reviews