
ಬೆಂಗಳೂರು: ಪ್ರಣಾಳಿಕೆ ಮತ್ತು ಬಜೆಟ್‌ನಲ್ಲಿ ಭರವಸೆ ನೀಡಿದಂತೆ ವರ್ಷಕ್ಕೆ 5000 ಕೋಟಿ ರೂ. ಒದಗಿಸಲಾಗುವುದು. ಇದಕ್ಕಾಗಿ ಜುಲೈ 15 ರೊಳಗೆ ಕ್ರಿಯಾಯೋಜನೆ ರೂಪಿಸುವಂತೆ ಕೆಕೆಆರ್ ಡಿಬಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ, ಕಾಮಗಾರಿಗಳ ಮೌಲ್ಯಮಾಪನ ಮಾಡಬೇಕು. ಈಗ ಅನುಮೋದನೆ ಆಗಿರುವ ಹಾಗೂ ಟೆಂಡರ್ ಕರೆಯದೇ ಇರುವ ಕಾಮಗಾರಿಗಳಿಗೆ ಕೂಡಲೇ ಟೆಂಡರ್ ಕರೆಯಬೇಕು ಎಂದು ಸೂಚಿಸಿದರು. ಒಟ್ಟು 14,228 ಕೋಟಿ ಅನುದಾನದಲ್ಲಿ 10,342.90 ಕೋಟಿ ವೆಚ್ಚವಾಗಿದೆ. 2,885.90 ಕೋಟಿ ಉಳಿದಿದೆ. ಬಾಕಿ ಉಳಿದ ಕಾಮಗಾರಿಗಳ ಕುರಿತು ನಿಯಮಿತವಾಗಿ ಪ್ರಗತಿ ಪರಿಶೀಲನೆ ನಡೆಸಿ, ಅನುಷ್ಠಾನಕ್ಕೆ ಇರುವ ತೊಡಕುಗಳನ್ನು ನಿವಾರಿಸಬೇಕು ಎಂದರು.
ಬಾಕಿ ಉಳಿದಿರುವ 3,528 ಕಾಮಗಾರಿಗಳನ್ನು ಜುಲೈ ಅಂತ್ಯದೊಳಗೆ ಪ್ರಾರಂಭಿಸಬೇಕು. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಎರಡು ವರ್ಷಗಳನ್ನು ಶೈಕ್ಷಣಿಕ ವರ್ಷ ಎಂದು ಘೋಷಿಸಿ, ಶೇ.25 ರಷ್ಟು ಅನುದಾನ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬೇಡಿಕೆ ಇದೆ. ನಿಗದಿತ ಮಾನದಂಡಗಳಂತೆಯೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ 41 ಮಹಿಳಾ ಪದವಿ ಕಾಲೇಜು ಪ್ರಾರಂಭಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಇದನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅರಣ್ಯೀಕರಣಕ್ಕೆ ಮತ್ತು ಶುದ್ಧ ಕುಡಿಯುವ ನೀರು, ಚೆಕ್ ಡ್ಯಾಂಗಳಿಗೆ ಆದ್ಯತೆ ನೀಡುವ ಮೂಲಕ ಅಂತರ್ಜಲ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಂಡು, ಕಾರ್ಯಕ್ರಮಗಳನ್ನು ರೂಪಿಸುವಂತೆ ಸೂಚನೆ ನೀಡಿದರು.
Poll (Public Option)

Post a comment
Log in to write reviews