
ತುಮಕೂರು: ಪೋಕ್ಸೋ ಪ್ರಕರಣದ ಸಂಬಂಧ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಅಗತ್ಯ ಬಿದ್ದರೆ ಸಿಐಡಿಯವರು ಬಂಧಿಸುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋಕ್ಸೋ ಪ್ರಕರಣ ಸಂಬಂಧ ಜೂನ್ 15ರೊಳಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕಿದೆ. ಯಡಿಯೂರಪ್ಪ ಅವರಿಗೆ ಈಗಾಗಲೇ ನೀಡಿರುವ ನೋಟಿಸ್ ಗೆ ಉತ್ತರ ನೀಡಬೇಕಾಗುತ್ತದೆ. ಪ್ರಕರಣ ಸಂಬಂಧ ಅಗತ್ಯ ಬಿದ್ದಲ್ಲಿ ಸಿಐಡಿಯವರು ಯಡಿಯೂರಪ್ಪರನ್ನ ಬಂಧಿಸುತ್ತಾರೆ. ಈ ಬಗ್ಗೆ ನಾನು ಏನೂ ಹೇಳಲು ಆಗದು ಎಂದರು.
ಪೋಕ್ಸೋ ಪ್ರಕರಣ ಸಂಬಂಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಆದರೆ ಯಡಿಯೂರಪ್ಪ ದೆಹಲಿ ಇರುವ ಕಾರಣ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ. ಈ ಮಧ್ಯೆ ಪ್ರಕರಣದಲ್ಲಿ ವಿಚಾರಣೆಗೆ ತಡೆ ಕೋರಿ ಬಿಎಸ್ವೈ ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಈ ಮಧ್ಯೆ ಸಿಐಡಿ ನೀಡಿರುವ ಗಡುವು ಇನ್ನೆರಡು ದಿನಗಳಲ್ಲಿ ಮುಕ್ತಾಯವಾಗಲಿದ್ದು, ಗೃಹ ಸಚಿವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ನಿವಾಸಕ್ಕೆ ಸಹಾಯ ಕೋರಿ ಹೋಗಿದ್ದಾಗ ತಮ್ಮ ಪುತ್ರಿಯ ಜೊತೆಗೆ ಯಡಿಯೂರಪ್ಪನವರು ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಈ ಮಹಿಳೆಯೋರ್ವರು ಮಾರ್ಚ್ 14ರಂದು ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಅದರ ಮರುದಿನ ಈ ಪ್ರಕರಣದ ತನಿಖೆ ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿತ್ತು. ಸಿಐಡಿ ತಂಡದ ವತಿಯಿಂದ ತನಿಖೆಗೊಳಪಟ್ಟಿರುವ ಈ ಪ್ರಕರಣದಲ್ಲಿ ಅಧಿಕಾರಿಗಳು ಸಂತ್ರಸ್ತೆಯ ಹೇಳಿಕೆಗಳನ್ನು ಈಗಾಗಲೇ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ದೂರು ನೀಡಿರುವ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
Poll (Public Option)

Post a comment
Log in to write reviews