ಚಾಮರಾಜನಗರದಲ್ಲಿ ಕುಗ್ಗಿದ ಬಿಎಸ್ಪಿ ಬಲ : ಸಾಂಪ್ರದಾಯಿಕ ಮತಗಳು ಪಲ್ಲಟ ಆಗಿದ್ಯಾಕೆ..?
ಬೆಂಗಳೂರು : ಗಡಿಜಿಲ್ಲೆ ಚಾಮರಾಜನಗರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷ ನಿರೀಕ್ಷಿತ ಮತಗಳಿಸುವಲ್ಲಿ ವಿಫಲವಾಗಿದ್ದು, ಈ ಹಿಂದಿನ ತನ್ನ ಶಕ್ತಿಯನ್ನು ಕಳೆದುಕೊಂಡಿದೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಗ್ರಾಮೀಣ ಭಾಗದಲ್ಲಿದ್ದ ಬಿಎಸ್ಪಿ ಪಕ್ಷದ ಸಂಘಟನೆ ಪ್ರಭಾವ ಕ್ರಮೇಣವಾಗಿ ತಗ್ಗಿದೆ.
ಸಂಘಟನೆಯ ಪ್ರಭಾವ ಕುಗ್ಗಲು ಮುಖ್ಯಕಾರಣ ಜಿಲ್ಲೆಯ ಪ್ರಭಾವಿ ದಲಿತ ನಾಯಕರಾಗಿದ್ದ ಎನ್ ಮಹೇಶ್ ಪಕ್ಷದಿಂದ ಉಚ್ಚಾಟನೆಗೊಂಡಿದ್ದು ಮತ್ತು ಬಿಎಸ್ಪಿ ಪಕ್ಷವು ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದು ಪಕ್ಷದ ಹಿನ್ನಡೆಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷವು ಅತ್ಯಂತ ಕಡಿಮೆ ಮತಗಳನ್ನು ಪಡೆದಿರುವುದು, ತನ್ನ ಸಾಂಪ್ರದಾಯಿಕ ಮತಗಳು ಪಲ್ಲಟಗೊಳ್ಳಲು ಕಾರಣವೇನು ಎಂಬುದರ ವಿಶ್ಲೇಷಣೆ ನಡೆಯುತ್ತಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಡಾ.ಶಿವಕುಮಾರ್ ಅವರು 87, 631 ಮತಗಳನ್ನು ಗಳಿಸಿದ್ದರು. ಆದರೆ, ಈ ಬಾರಿ ಅಭ್ಯರ್ಥಿಯಾಗಿದ್ದ ಎಂ.ಕೃಷ್ಣಮೂರ್ತಿ ಅವರು ಕೇವಲ 15,903 ಮತಗಳನ್ನು ಮಾತ್ರ ಪಡೆದಿದ್ದಾರೆ. ಇದರಿಂದ ಬಿಎಸ್ಪಿಯ ಸಾಂಪ್ರದಾಯಿಕ ಮತಗಳು ಪಲ್ಲಟಗೊಂಡು, ಕಾಂಗ್ರೆಸ್ನತ್ತ ಮುಖ ಮಾಡಿವೆ. ಇದಕ್ಕೆ ಮುಖ್ಯ ಕಾರಣವೆಂದರೆ, ರಾಷ್ಟ್ರ ರಾಜಕೀಯದಲ್ಲಿ ಮಾಯಾವತಿ ಅವರು ಪ್ರಸ್ತುತತೆಯನನ್ನು ಕಳೆದುಕೊಂಡಿರುವುದು, ಉತ್ತರ ಪ್ರದೇಶದಲ್ಲಿ ಪಕ್ಷದ ಬಲ ಕುಗ್ಗಿರುವುದು, ಸಂವಿಧಾನ ಬದಲಾವಣೆ ಕುರಿತು ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗಳು ಬಿಎಸ್ಪಿ ಪಕ್ಷದ ಹಿನ್ನಡೆಗೆ ಕಾರಣವಾಗಿವೆ.
ಈ ಹಿಂದೆ ಕೊಳ್ಳೆಗಾಲ ಶಾಸಕರಾಗಿದ್ದ ಎನ್.ಮಹೇಶ್ ಅವರು, ಹಳೇ ಮೈಸೂರು ಭಾಗದಲ್ಲಿ ಬಿಎಸ್ಪಿ ಪಕ್ಷದ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದರು. ಅವರ ಪ್ರಭಾವದಿಂದಲೇ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿಯಿಂದಲೇ ಗೆದ್ದು ಇತಿಹಾಸ ನಿರ್ಮಿಸಿದ್ದರು. ಆಗ ಬಿಎಸ್ಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರ ಪಡೆ ಇತ್ತು. ಆದರೆ ಈಗ ಕಾರ್ಯಕರ್ತರ ಕೊರತೆಯನ್ನೂ ಕೂಡಾ ಬಿಎಸ್ಪಿ ಎದುರಿಸುತ್ತಿದೆ. ಹೀಗಾಗಿಯೇ ತನ್ನ ಸಾಂಪ್ರದಾಯಿಕ ಮತಗಳನ್ನು ಸೆಳೆಯುವಲ್ಲೂ ಬಿಎಸ್ಪಿ ವಿಫಲವಾಗಿದೆ.
ಈ ಹಿಂದಿನ ಲೋಕಸಭೆ ಚುನಾವಣೆಗಳಲ್ಲಿ ಬಿಎಸ್ಪಿ ಪಡೆದ ಮತಗಳು :
2004 ಲೋಕಸಭಾ ಚುನಾವಣೆ : ಎನ್. ಶಿವಮಲ್ಲು-78, 855
2009 ಲೋಕಸಭಾ ಚುನಾವಣೆ: ಎನ್. ಮಹೇಶ್- 68,447
2014 ಲೋಕಸಭಾ ಚುನಾವಣೆ: ಎನ್. ಶಿವಮಲ್ಲು- 34,846
2019 ಲೋಕಸಭಾ ಚುನಾವಣೆ : ಡಾ. ಶಿವಕುಮಾರ್- 87,631
2024 ಲೋಕಸಭಾ ಚುನಾವಣೆ : ಎಂ. ಕೃಷ್ಣಮೂರ್ತಿ: 15,903
Post a comment
Log in to write reviews