ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸೆ.5ರವರೆಗೆ ದಕ್ಷಿಣ ಏಷ್ಯಾ ದೇಶಗಳಾದ ಬ್ರೂನಿ ಹಾಗೂ ಸಿಂಗಾಪುರ್‌ಗೆ ಇಂದಿನಿಂದ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು, ಈ ಪ್ರವಾಸದ ಮೊದಲ ಭಾಗವಾಗಿ ಇಂದು (ಆಗಸ್ಟ್ 3) ಅವರು ದೆಹಲಿಯಿಂದ ಬ್ರೂನಿಗೆ ಪ್ರಯಾಣ ಬೆಳೆಸಿದರು.
ಬ್ರೂನಿಯಿಂದ ಬುಧವಾರ ಮೋದಿ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲಿದ್ದು, ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ, ಪ್ರಧಾನಿ ಲಾರೆನ್ಸ್ ವಾಂಗ್, ಹಿರಿಯ ಸಚಿವ ಲೀ ಸೀನ್ ಲೂಂಗ್ ಮತ್ತು ಹಿರಿಯ ಸಚಿವ ಗೋ ಚೋಕ್ ಟಾಂಗ್ ಹಾಗೂ ಸಿಂಗಾಪುರ್‌ದ ವ್ಯಾಪಾರ ಸಮುದಾಯದ ಮುಖಂಡರನ್ನು ಭೇಟಿಯಾಗಲಿದ್ದಾರೆ.
ಭಾರತ ಹಾಗೂ ಬ್ರೂನಿ ನಡುವೆ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿ ನಲ್ವತ್ತು ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಬ್ರೂನಿ ದರುಸ್ಸಲಾಮ್ಗೆ ನೀಡುತ್ತಿರುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಭಾರತ-ಬ್ರೂನಿ ಮತ್ತು ಸಿಂಗಾಪುರ್ ನಡುವಿನ ಪಾಲುದಾರಿಕೆಯ ಹೊಸ ಮಾರ್ಗಗಳನ್ನು ಅನ್ವೇಷಿಸುವುದರ ಜೊತೆಗೆ ಅಸ್ತಿತ್ವದಲ್ಲಿರುವ ವ್ಯಾಪಾರ ಸಂಬಂಧಗಳ ಬಗ್ಗೆ ಪ್ರಧಾನಿ ಚರ್ಚಿಸುವ ನಿರೀಕ್ಷೆ ಇದೆ.
ನಿರ್ಗಮನಕ್ಕೂ ಮುನ್ನ ಪ್ರತಿಕ್ರಿಯಿಸಿರುವ ಮೋದಿ, ಬ್ರೂನಿ ಹಾಗೂ ಭಾರತ 40ನೇ ವರ್ಷದ ರಾಜತಾಂತ್ರಿಕ ಸಂಬಂಧವನ್ನು ಆಚರಿಸುತ್ತಿದೆ. ಬ್ರೂನಿ ಜೊತೆಗಿನ ಐತಿಹಾಸಿಕ ಬಾಂಧವ್ಯವನ್ನು ಹೊಸತನದೊಂದಿಗೆ ಮುಂದುವರೆಸುವ ಹಾಗೂ ಸಿಂಗಾಪುರ್‌ದೊಂದಿಗೆ ತನ್ನ ಕಾರ್ಯತಂತ್ರ ಪಾಲುದಾರಿಕೆಯನ್ನು ಬಲಪಡಿಸುವ ವಿಶ್ವಾಸ ವ್ಯಕ್ತಪಡಿಸಿದರು.
"ಐತಿಹಾಸಿಕ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸುಲ್ತಾನ್ ಹಾಜಿ ಸಹನಲ್ ಬೊಲ್ಕಿಯಾ ಮತ್ತು ರಾಜಮನೆತನದ ಇತರ ಸದಸ್ಯರ ಜೊತೆಗಿನ ಸಭೆಗಳನ್ನು ನಾನು ಎದುರು ನೋಡುತ್ತಿದ್ದೇನೆ" ಎಂದು ತಮ್ಮ ನಿರ್ಗಮನ ಹೇಳಿಕೆಯಲ್ಲಿ ಮೋದಿ ತಿಳಿಸಿದ್ದಾರೆ.
"ವಿಶೇಷವಾಗಿ ಸುಧಾರಿತ ಉತ್ಪಾದನೆ, ಡಿಜಿಟಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿಯ ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಸಿಂಗಾಪುರ್‌ದೊಂದಿಗಿನ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಗಾಢವಾಗಿಸಲು ನೋಡುತ್ತಿದ್ದೇನೆ. ನನ್ನ ಭೇಟಿಗಳು ಬ್ರೂನಿ, ಸಿಂಗಾಪುರ ಮತ್ತು ದೊಡ್ಡ ASEAN ಪ್ರದೇಶದೊಂದಿಗೆ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸವಿದೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
Post a comment
Log in to write reviews