ಪೆನ್ನು ಕದ್ದಿದ್ದಕ್ಕೆ ಬಾಲಕನ ಮೇಲೆ ಹಲ್ಲೆ: ಮಗನ ಸ್ಥಿತಿ ಕಂಡು ಆಘಾತಕ್ಕೊಳಗಾದ ತಾಯಿ!
ರಾಯಚೂರು: ಪೆನ್ನು ಕದ್ದಿದ್ದಕ್ಕೆ ಬಡ ವಿದ್ಯಾರ್ಥಿಯೋರ್ವನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಅಮಾನವೀಯ ಘಟನೆ ರಾಯಚೂರು ನಗರದ ರಾಮಕೃಷ್ಣ ಆಶ್ರಮದಲ್ಲಿ ನಡೆದಿದೆ.
ಶ್ರವಣ್ ಕುಮಾರ್ ಎಂಬ ಬಾಲಕನ ಮೇಲೆ ರಾಮಕೃಷ್ಣ ಮಠದ ಗುರೂಜಿ ವೇಣುಗೋಪಾಲ್ ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ, ಶ್ರವಣ್ ಕುಮಾರ್ ಎಂಬ ವಿದ್ಯಾರ್ಥಿ ಬಡತನದ ಕಾರಣಕ್ಕೆ ನಗರದ ಸ್ಟೇಷನ್ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಪೋಷಕರು ಸೇರಿಸಿದ್ದರು. ಆಕಸ್ಮಿಕವಾಗಿ ಮಗನ ಯೋಗಕ್ಷೇಮ ವಿಚಾರಿಸಲು ಆಶ್ರಮಕ್ಕೆ ಭೇಟಿ ನೀಡಿದ ತಾಯಿ ಮಗುವಿನ ಸ್ಥಿತಿ ಕಂಡು ಆಘಾತಕ್ಕೊಳಗಾಗಿದ್ದು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಹಿನ್ನೆಲೆ?
ಸಹಪಾಠಿಗಳ ಜೊತೆ ಆಟವಾಡುವ ವೇಳೆ ತಿಳಿದೋ ತಿಳಿಯದೋ ಪೆನ್ನು ಕದ್ದಿದ್ದ ಬಾಲಕ ಶ್ರವಣಕುಮಾರ್ ಮೇಲೆ ಸಹಪಾಠಿಗಳು ಗುರೂಜಿ ವೇಣುಗೋಪಾಲ್ ಬಳಿ ದೂರು ನೀಡಿದ್ದಾರೆ. ದೂರು ನೀಡುತ್ತಿದ್ದಂತೆ ಬಾಲಕನಿಗೆ ಮನಸೋ ಇಚ್ಛೆ ಥಳಿಸಿ ಅಷ್ಟು ಸಾಲದ್ದಕ್ಕೆ ಮೂರು ದಿನಗಳ ಕಾಲ ಕತ್ತಲೆ ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಹಲ್ಲೆಯಿಂದ ಬಾಲಕನ ಕಣ್ಣುಗಳು ಬಾವು ಬಂದಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ರಾಯಚೂರು ಪಶ್ಚಿಮ ಪೊಲೀಸರು ಆರೋಪಿ ವೇಣುಗೋಪಾಲನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Post a comment
Log in to write reviews