
ದೆಹಲಿ, ಹೈದರಾಬಾದ್ ಸೇರಿ ದೇಶದ ವಿವಿಧೆಡೆ ಇರುವ ಸಿಆರ್ಪಿಎಫ್ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಅವುಗಳಲ್ಲಿ ಎರಡು ದೆಹಲಿಯಲ್ಲಿ ಮತ್ತು ಒಂದು ಹೈದರಾಬಾದ್‌ನಲ್ಲಿವೆ. ಸೋಮವಾರ ತಡರಾತ್ರಿ ಈ ಶಾಲೆಗಳ ಆಡಳಿತ ಮಂಡಳಿಗೆ ಇಮೇಲ್ ಮೂಲಕ ಬೆದರಿಕೆಯನ್ನು ರವಾನಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ದೆಹಲಿಯ ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದ ಸಿಆರ್ಪಿಎಫ್ ಶಾಲೆಯ ಬಳಿ ಭಾನುವಾರ ಬೆಳಗ್ಗೆ ಭಾರಿ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಂಬ್ ಸ್ಕ್ವಾಡ್ ಮತ್ತು ಪೊಲೀಸ್ ವಿಧಿವಿಜ್ಞಾನ ತಂಡಗಳು ಬೆಳಗ್ಗೆ 2.50ರ ಸುಮಾರಿಗೆ ಸಂಭವಿಸಿದ ಸ್ಫೋಟದ ಕಾರಣವನ್ನು ಕಂಡುಹಿಡಿಯಲು ಸೆಕ್ಟರ್ 14ರಲ್ಲಿರುವ ಸಿಆರ್ಪಿಎಫ್ ಶಾಲೆಯ ಬಳಿಗೆ ಆಗಮಿಸಿದ್ದವು.
ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಅಪರಾಧ ವಿಭಾಗ ಮತ್ತು ವಿಶೇಷ ಸೆಲ್ ಮತ್ತು ಅಗ್ನಿಶಾಮಕ ದಳ ಕೂಡ ಸ್ಥಳದಲ್ಲಿದ್ದು, ಪರಿಶೀಲನೆ ನಡೆಸಿದ್ದರು. ಹತ್ತಿರದ ಅಂಗಡಿಗಳು, ಶಾಲೆಯ ಗೋಡೆ, ಮತ್ತು ಕಾರಿಗೆ ಹಾನಿಯಾಗಿದ್ದು, ಇಡೀ ಪ್ರದೇಶದ ಸುತ್ತ ಯಾರೂ ಬರದಂತೆ ನಿರ್ಬಂಧ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ನಂತರ ದಟ್ಟವಾದ ಬಿಳಿ ಹೊಗೆ ಕಾಣಿಸಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ದೊಡ್ಡ ಶಬ್ದದೊಂದಿಗೆ ಸ್ಫೋಟ ಸಂಭವಿಸಿದೆ ಎಂದು ಬೆಳಗ್ಗೆ 7.47ಕ್ಕೆ ಪಿಸಿಆರ್ ಕರೆ ಬಂದಿತ್ತು. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Poll (Public Option)

Post a comment
Log in to write reviews