ಸಿಎಂ ರಾಜೀನಾಮೆಗೆ ಆಗ್ರಹಿಸಿ ಇಂದು ಗಾಂಧಿ ಪ್ರತಿಮೆ ಎದುರು ಬಿಜೆಪಿ, ಜೆಡಿಎಸ್ ಧರಣಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಖಂಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲು ರಾಜ್ಯ ಕಾಂಗ್ರೆಸ್ ಮುಂದಾಗಿದ್ದರೆ, ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ವಿಧಾನಸೌಧ-ವಿಕಾಸಸೌಧ ನಡುವಿನ ಗಾಂಧಿ ಪ್ರತಿಮೆ ಬಳಿ ಇಂದು (ಆಗಸ್ಟ್ 19) ಪ್ರತಿಭಟಿಸಲು ನಿರ್ಧರಿಸಿವೆ.
ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಿದ್ದ ಮಿತ್ರಪಕ್ಷಗಳು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೂ ರಾಜೀನಾಮೆ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಸಿಎಂ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರವು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದರೆ ಬಿಜೆಪಿ ಮತ್ತು ಜೆಡಿಎಸ್ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಮಾಡಲಿವೆ. ತಪ್ಪು ಮುಚ್ಚಿಕೊಳ್ಳಲು ರಾಜ್ಯಪಾಲರು ಹಾಗೂ ಕೇಂದ್ರದ ವಿರುದ್ಧ ಕಾಂಗ್ರೆಸ್ ಆರೋಪಿಸುತ್ತಿದೆ ಎಂಬ ಜನಾಭಿಪ್ರಾಯವನ್ನು ಮೈತ್ರಿ ನಾಯಕರು ಬಿತ್ತಲಿದ್ದಾರೆ.
ಈ ಕುರಿತು ಭಾನುವಾರ ಪಕ್ಷದ ಕಚೆರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕ ಆರ್.ಅಶೋಕ್, ಮುಡಾ ಹಗರಣ ನಡೆಸಿದ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಸೋಮವಾರ 11.30ಕ್ಕೆ ಪ್ರತಿಭಟಿಸಲಾಗುವುದು ಎಂದರು.
Post a comment
Log in to write reviews