ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಸರಕಾರಿ ಶಾಲೆಗಳು, ಕಾಲೇಜುಗಳು, ಬಿಬಿಎಂಪಿ ಅಧೀನದ ಶೈಕ್ಷಣಿಕ ಸಂಸ್ಥೆಗಳು ಆಸ್ಪತ್ರೆಗಳು, ಪಾರ್ಕ್‌ಗಳು, ಸರಕಾರಿ ಕಟ್ಟಡಗಳಲ್ಲಿರುವ ಅಂಗನವಾಡಿಗಳು ಸೇರಿದಂತೆ ಸರಕಾರಿ ಕಟ್ಟಡಗಳಲ್ಲಿ ಜಲಮಂಡಳಿಯ ವತಿಯಿಂದ ಮಳೆ ನೀರು ಕೊಯ್ಲು ವ್ಯವಸ್ಥೆ ಹಾಗೂ ಇಂಗುಗುಂಡಿಗಳನ್ನು ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ಒಂದು ವಾರದಲ್ಲಿ ಕ್ರಿಯಾಯೋಜನೆ ಸಲ್ಲಿಸುವಂತೆ ಮೇ 14ರಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ ವಿ ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಜಲಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಚನೆ ನೀಡಿದರು. ಸಾರ್ವಜನಿಕರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಈಗಾಗಲೇ ಜಲಮಂಡಳಿಯ ವತಿಯಿಂದ ತಮ್ಮ ವ್ಯಾಪ್ತಿಯಲ್ಲಿ 1000 ಕ್ಕೂ ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಇನ್ನೂ ಹೆಚ್ಚಿನ 1000 ಇಂಗುಗುಂಡಿಗಳನ್ನು ಜಲಮಂಡಳಿ ನಿರ್ಮಿಸಲಿದೆ ಎಂದು ಹೇಳಿದರು.
ಸರಕಾರಿ ಕಟ್ಟಡಗಳಲ್ಲಿ ಮಂಡಳಿ ವತಿಯಿಂದ ಮಳೆ ನೀರು ಕೊಯ್ಲು ವ್ಯವಸ್ಥೆ ಹಾಗೂ ಇಂಗುಗುಂಡಿಗಳ ಅಳವಡಿಕೆ:
ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡುವಂತಹ ಪ್ರದೇಶಗಳಾದ ಸರಕಾರಿ ಶಾಲೆಗಳು, ಕಾಲೇಜುಗಳು, ಬಿಬಿಎಂಪಿ ಅಧೀನದ ಶೈಕ್ಷಣಿಕ ಸಂಸ್ಥೆಗಳು ಆಸ್ಪತ್ರೆಗಳು, ಪಾರ್ಕ್‌ಗಳು, ಸರಕಾರಿ ಕಟ್ಟಡಗಳಲ್ಲಿರುವ ಅಂಗನವಾಡಿಗಳು ಸೇರಿದಂತೆ ಸರಕಾರಿ ಕಟ್ಟಡಗಳಲ್ಲಿ ಮಳೆ ನೀರು ಪದ್ದತಿಯನ್ನು ಅಳವಡಿಸಬೇಕು. ಇದರ ನೀರನ್ನು ಮರುಬಳಕೆ ಮಾಡುವ ಹಾಗೂ ಹೆಚ್ಚುವರಿ ನೀರನ್ನು ಇಂಗುಗುಂಡಿಗಳ ಮೂಲಕ ಅಂತರ್ಜಲ ಮರುಪೂರಣ ಮಾಡಿಸುವ ವ್ಯವಸ್ಥೆಯನ್ನು ಮಂಡಳಿಯ ವತಿಯಿಂದ ಅಳವಡಿಸಲಾಗುವುದು. ಆ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಹಾಗೂ ಇಂಗುಗುಂಡಿಗಳ ಅಳವಡಿಕೆಯ ಮಾಹಿತಿ, ಅದರಿಂದ ಆಗುವಂತಹ ಪ್ರಯೋಜನಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಹಿತಿ ಫಲಕಗಳ ಅಳವಡಿಕೆ:
ಮಳೆ ನೀರು ಪದ್ದತಿ ಮತ್ತು ಇಂಗುಗುಂಡಿಗಳನ್ನ ಅಳವಡಿಸುವುದರ ಜೊತೆಯಲ್ಲೇ ಎಲ್ಲರಿಗೂ ಕಾಣುವ ರೀತಿಯಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು. ಈ ವ್ಯವಸ್ಥೆಯ ಅಳವಡಿಕೆಯಿಂದ ಆಗುವಂತಹ ಎಲ್ಲಾ ಉಪಯೋಗಗಳ ಬಗ್ಗೆ ಸಾರ್ವಜನಿಕರು ಮಾಹಿತಿ ತಿಳಿದುಕೊಳ್ಳಲು ಇದರಿಂದ ಅವಕಾಶ ಸಿಗಲಿದೆ.
ಸರಕಾರಿ ಶಾಲೆ, ಕಾಲೇಜುಗಳಲ್ಲಿ ಹೆಚ್ಚಿನ ಆದ್ಯತೆ ನೀಡಿ:
ಸರಕಾರಿ ಶಾಲೆ, ಕಾಲೇಜುಗಳು, ಬಿಬಿಎಂಪಿ ಯ ಶೈಕ್ಷಣಿಕ ಸಂಸ್ಥೆಗಳು ಹಾಗೂ ಸರಕಾರಿ ಕಟ್ಟಡಗಳಲ್ಲಿರುವ ಅಂಗನವಾಡಿಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಶಾಲಾ ವಿದ್ಯಾರ್ಥಿಗಳು ಈ ವ್ಯವಸ್ಥೆಯನ್ನು ಹಾಗೂ ಅದರಿಂದ ಅವರಿಗೆ ಆಗುತ್ತಿರುವ ಉಪಯೋಗವನ್ನು ಪ್ರಾಯೋಗಿಕವಾಗಿ ವೀಕ್ಷಿಸಬೇಕು. ಇದರಿಂದ ತಮ್ಮ ಅಕ್ಕ ಪಕ್ಕದ ಪ್ರದೇಶದಲ್ಲಿ ಹೆಚ್ಚಿನ ಜನರಿಗೆ ತಿಳುವಳಿಕೆಯನ್ನು ಹಂಚುವ ಕಾರ್ಯ ಆಗಬೇಕು ಎನ್ನುವುದು ಉದ್ದೇಶವಾಗಿದೆ.
ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲೂ ಪ್ರಾಯೋಗಿಕ ಪ್ರಾತ್ಯಕ್ಷಿಕೆ ನೀಡುವಂತೆ ಸೂಚನೆ:
ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲೂ ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿ ವಿದ್ಯಾರ್ಥಿಗಳಿಗೆ ಈ ಬಗ್ಗೆ ಪ್ರಾತ್ಯಕ್ಷಿಕೆ ನೀಡುವಂತೆ ಸೂಚನೆ ನೀಡಲಾಗುವುದು ಎಂಧರು.
ಧಾರ್ಮಿಕ ಪ್ರದೇಶಗಳಲ್ಲೂ ಅಳವಡಿಕೆ:
ವಲಯವಾರು ಪ್ರದೇಶಗಳಲ್ಲಿ ಎಲ್ಲಾ ಧಾರ್ಮಿಕ ಸಂಸ್ಥೆಗಳ ಆವರಣದಲ್ಲೂ ಮಂಡಳಿ ವತಿಯಿಂದ ಮಳೇ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಲಾಗುವುದು. ಇದರ ಮೂಲಕ ಆಯಾ ಸ್ಥಳಗಳಿಗೆ ಭೇಟಿ ನೀಡುವಂತಹ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ನೀರಿನ ಸದ್ಬಳಕೆಗೆ ಉತ್ತೇಜನ ನೀಡಿದಂತಾಗುತ್ತದೆ.
ಪ್ರಮುಖ ಬಸ್‌ಸ್ಟಾಂಡ್‌ಗಳು, ಬಿಎಂಟಿಸಿ ಬಸ್ ಸ್ಟಾಂಡ್‌ಗಳಲ್ಲೂ ಅಳವಡಿಕೆ:
ಸರಕಾರಿ ಬಸ್‌ಸ್ಟಾಂಡ್ ಗಳು, ಬಿಎಂಟಿಸಿ ಬಸ್ ಸ್ಟಾಂಡ್‌ಗಳಲ್ಲೂ ಕೂಡಾ ಆಯಾ ಸಂಸ್ಥೆಗಳ ಸಹಯೋಗದಲ್ಲಿ ಮಳೆ ನೀರು ಕೋಯ್ಲು ವ್ಯವಸ್ಥೆ ಹಾಗೂ ಇಂಗುಗುಂಡಿಗಳನ್ನು ಅಳವಡಿಸಲಾಗುವುದು. ಇದರಿಂದ ಹೆಚ್ಚಿನ ಜನ ಸಾಂದ್ರತೆ ಇರುವ ಕಡೆಗಳಲ್ಲಿ ಸಾರ್ವಜನಿಕರಲ್ಲಿ ಮಾಹಿತಿ ನೀಡಿದಂತಾಗುತ್ತದೆ.
ಇದರಿಂದಾಗಿ ಜನರಲ್ಲಿ ಮಳೆ ನೀರನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಆಂದೋಲನ ಮಾಡಿದಂತಾಗುತ್ತದೆ. ಸಾರ್ವಜನಿಕರು ಹೆಚ್ಚಾಗಿ ಭೇಟಿ ನೀಡುವ ಪ್ರದೇಶಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ವ್ಯವಸ್ಥೆಯ ಅಳವಡಿಕೆಯಿಂದ ಮುಂದಿನ ಪ್ರಜೆಗಳಾದ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ಆ ಮೂಲಕ ಅವರ ಹಿರಿಯಲ್ಲಿ ತಿಳುವಳಿಕೆ ಬೆಳೆಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ವಾರದಲ್ಲಿ ಕಟ್ಟಡಗಳ ಪಟ್ಟಿಯನ್ನು ಹಾಗೂ ಅಗತ್ಯ ಕ್ರಿಯಾಯೋಜನೆಯನ್ನು ಸಲ್ಲಿಸಲು ಸೂಚನೆ ನೀಡಲಾಗಿದೆ. ಮಂಡಳಿಯ ಅನುಮತಿಯ ಆಧಾರದ ಮೇಲೆ ವೈಜ್ಞಾನಿಕವಾಗಿ ಈ ವ್ಯವಸ್ಥೆಯ ಅಳವಡಿಕೆಗೆ ಅವಕಾಶ ನೀಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ವಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಸಭೆಯಲ್ಲಿ ಪ್ರಧಾನ ಮುಖ್ಯ ಎಂಜನಿಯರ್ ಸುರೇಶ, ಮುಖ್ಯ ಎಂಜನಿಯರ್ ಗಳಾದ ಎಲ್. ಕುಮಾರ ನಾಯ್ಕ್, ಕೆ.ಎನ್.ಪರಮೇಶ, ಎಸ್.ವಿ.ವೆಂಕಟೇಶ, ಎ.ರಾಜಶೇಖರ್, ಮಹೇಶ ಕೆ.ಎನ್., ರಾಜೀವ್ ಕೆ.ಎನ್., ಗಂಗಾಧರ್ ಬಿ.ಸಿ., ದೇವರಾಜು ಎಂ., ಜಯಶಂಕರ್, ಅಪರ ಮುಖ್ಯ ಎಂಜನಿಯರ್ ಮಧುಸೂಧನ್ ಸೇರಿದಂತೆ ಇನ್ನೀತರ ಅಧಿಕಾರಿಗಳು ಇದ್ದರು.
Tags:
- India News
- Kannada News
- rainwater harvesting
- bangalore
- rainwater harvesting bangalore
- water crisis in bangalore
- rainwater harvesting project
- rainwater harvesting in india
- bangalore water crisis
- rainwater harvesting zenrainman shri viswanath at apartmentadda
- why bangalore is facing water crisis
- water tankers bangalore
- bangalore latest news
- lake rejuvenation bangalore
- residents forum bangalore rwa
- how bangalore gets water
- drainage problem bangalore
- bangalore sewerage board
Post a comment
Log in to write reviews