
ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂಬಂಧಪಟ್ಟಂತೆ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ, ಬಂಧನ ಭೀತಿ ಎದುರಿಸುತ್ತಿರುವ ಹೆಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರಕ್ಕೆ ಮುಂದೂಡಿದೆ.
ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಭವಾನಿ ಅವರು ಸೋಮವಾರ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ವೇಳೆ ಅರ್ಜಿಗೆ ಸಂಬಂಧಿಸಿದಂತೆ ಎಸ್ಐಟಿ ಪರ ಹಾಜರಾಗಿದ್ದ ಎಸ್ಪಿಪಿ ಬಿ.ಎನ್. ಜಗದೀಶ್ ದೂರಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿಲ್ಲ. ಆದ್ದರಿಂದ ವಿಚಾರಣೆಯನ್ನು ಗುರುವಾರ ಅಥವಾ ಶುಕ್ರವಾರಕ್ಕೆ ಮುಂದೂಡಲು ಮನವಿ ಮಾಡಿದರು. ಅಲ್ಲದೆ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಈ ವೇಳೆ ಅರ್ಜಿದಾರರ ಪರ ವಕೀಲರು, ನೋಟಿಸ್ ಇಲ್ಲದೆಯೂ ಬಂಧಿಸಲು ಅವಕಾಶವಿದೆ. ಇಂದೇ ಅವರನ್ನು ಬಂಧಿಸಿದರೆ ಏನು ಮಾಡುವುದು. ಹೀಗಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಬೇಕು. ಮುಂದಿನ ವಿಚಾರಣೆವರೆಗೂ ಬಂಧನದಿಂದ ರಕ್ಷಣೆ ನೀಡಬೇಕು ಎಂದು ಕೋರಿದರು.
ಅಲ್ಲದೆ, ಕೆಎಂಎಫ್‌ನ ನಿವೃತ್ತ ಅಧಿಕಾರಿಯೊಬ್ಬರನ್ನು 7ನೇ ಆರೋಪಿಯಾಗಿ ಮಾಡಲಾಗಿದೆ. ಎಸ್ಐಟಿ ವಿರುದ್ಧ ದೂರು ನೀಡಿದವರನ್ನೂ ಆರೋಪಿಯಾಗಿ ಮಾಡಲಾಗುತ್ತಿದೆ. ಹೀಗಾಗಿ ಭವಾನಿ ರೇವಣ್ಣರಿಗೆ ಬಂಧನದಿಂದ ರಕ್ಷಣೆ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಭವಾನಿಯನ್ನು ಈವರೆಗೂ ಆರೋಪಿಯನ್ನಾಗಿ ಮಾಡಿಲ್ಲ. ಎಫ್ಐಆರ್ ನಲ್ಲಿ ಸೇರಿಸದೇ ಬಂಧಿಸಬಾರದು ಎಂದೇನಿಲ್ಲ. ಆದರೆ, ಮಧ್ಯಂತರ ಜಾಮೀನು ಪರಿಗಣಿಸಲು ಏನಾದರೂ ದಾಖಲೆ ಬೇಕು. ಎಸ್ಐಟಿ ಮೊದಲು ಆಕ್ಷೇಪಣೆ ಸಲ್ಲಿಸಲಿ ಎಂದು ತಿಳಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ.
Poll (Public Option)

Post a comment
Log in to write reviews