
ಬೆಂಗಳೂರು : ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಅಟ್ಟಿಕಾ ಬಾಬು ಅಲಿಯಾಸ್ ಪಿ.ಎಸ್.ಅಯ್ಯೂಬ್ ರನ್ನು ತುರುವೇಕೆರೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಖರೀದಿ ಮಾಡಿದ ಕುರಿತು ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಬೆಂಗಳೂರಿನ ಮಾರಿಯಮ್ಮ ಅಪಾರ್ಟ್ಮೆಂಟ್ಸ್, ಫ್ರೇಜರ್ ಟೌನ್ ನಿವಾಸದ ಬಳಿ ಅಟ್ಟಿಕಾ ಬಾಬುರನ್ನ ನಿನ್ನೆ ಸಂಜೆ 6 ಗಂಟೆಯ ಹೊತ್ತಿಗೆ ಅರೆಸ್ಟ್ ಮಾಡಿದ್ದಾರೆ.
ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಖರೀದಿಸಿದ್ದ ಬಾಬು ವಿರುದ್ಧ ಐಪಿಸಿ ಸೆಕ್ಷನ್ 454, 380, 411, 413ರಡಿ ಕೇಸ್ ದಾಖಲಾಗಿದ್ದು, ತುರುವೇಕೆರೆ ಸಿಪಿಐ ಲೋಹಿತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನಾಭರಣ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಹಗಲು ಕಳ್ಳ ಉದಯ್ ಅಲಿಯಾಸ್ ಅಶೋಕ್ ಕದ್ದ ಒಡವೆಗಳನ್ನೆಲ್ಲ ಹೆಂಡತಿ ಶಾರದ ಎಂಬವರ ಮುಖಾಂತರ ಅಟ್ಟಿಕಾ ಗೋಲ್ಡ್ ಕಂಪನಿಗೆ ಮಾರುತ್ತಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಇದನ್ನ ಖರೀದಿಸುತ್ತಿದ್ದ ಅಟ್ಟಿಕಾ ಬಾಬುರನ್ನ ಬಂಧಿಸಲಾಗಿದೆ ಎಂದು ತುಮಕೂರು ಜಿಲ್ಲಾ ಪೊಲೀಸ್ ಕಚೇರಿ ಮಾಹಿತಿ ನೀಡಿದೆ.
Poll (Public Option)

Post a comment
Log in to write reviews