ಕ್ಲಾಸ್ ರೂಮಿನಲ್ಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಲಬುರಗಿಯಲ್ಲಿ ಶಿಕ್ಷಕನ ಬಂಧನ

ಕಲಬುರಗಿ: ಶಾಲಾ ಕೊಠಡಿಯಲ್ಲೇ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ. ಜಿಲ್ಲೆಯ ಆಳಂದ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ
5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಶಾಲೆಯಲ್ಲಿ ಬಿಸಿ ಊಟ ಮುಗಿಸಿ, ಬಾಲಕಿ ಕ್ಲಾಸ್ ರೂಮಿಗೆ ತೆರಳಿದ್ದಳು. ಬಾಲಕಿಯ ಹಿಂದೆಯೇ ಹೋದ ಶಿಕ್ಷಕ, ತರಗತಿಯ ಬಾಗಿಲು ಮುಚ್ಚಿ, ಬಾಲಕಿಯಿಂದ ಕಿಟಕಿಗಳನ್ನು ಮುಚ್ಚಿಸಿ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ. ಆಗ ಬಾಲಕಿ ಚೀರಾಡಿದ್ದು, ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಬರಿಯಾದ ಬಾಲಕಿ ಮನೆಗೆ ಹೋಗಿ ಪೋಷಕರಿಗೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಪೋಷಕರು ನೇರವಾಗಿ ಶಾಲೆಗೆ ಬಂದು ಮುಖ್ಯೋಪಾಧ್ಯಯರ ಗಮನಕ್ಕೆ ತಂದು ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಆರೋಪಿ ಶಿಕ್ಷಕನನ್ನು ಪೊಲೀಸರು ಬಂಧಿಸಿ, ಜೈಲಿಗೆ ಕಳಿಸಿದ್ದಾರೆ.
ಶಿಕ್ಷಕ ಅಮಾನತು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿ ಸಮಗ್ರ ಮಾಹಿತಿ ಕಲೆ ಹಾಕಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು. ವರದಿ ತಲುಪಿದ ಬಳಿಕ ತಕ್ಷಣದಿಂದಲೇ ಜಾರಿಗೆ ಬರುವಂತೆ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
Poll (Public Option)

Post a comment
Log in to write reviews