
ಗದಗ: ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ ತಾಂಡಾದಲ್ಲಿ, ಗೋವಾ ರಾಜ್ಯಕ್ಕೆ ಕಳ್ಳಸಾಗಣೆ ಮಾಡಿ ಮಾರಾಟ ಮಾಡಲು ಮುಂದಾದ ಹೆಣ್ಣು ಶಿಶುವನ್ನು ರಕ್ಷಿಸಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಮೂರು ದಿನಗಳ ಹಿಂದೆಯೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಹೆಣ್ಣು ಶಿಶುವಿನೊಂದಿಗೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಶಿಶುವಿನ ತಾಯಿ ಹಾಗೂ ಕುಟುಂಬ ವಾಸವಿದ್ದರು. ವಿಷಯ ತಿಳಿದ ಶಿಶು ಅಭಿವೃದ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ರುದ್ರಮ್ಮ, ಸಮಾಜ ಕಾರ್ಯಕರ್ತೆ ಲಲಿತಾ ಕುಂಬಾರ ಹಾಗೂ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರವೀಣಕುಮಾರ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಶಿಶು ರಕ್ಷಣೆ ಮಾಡಿ ಕಾರ್‌ನಲ್ಲಿ ಕರೆದುಕೊಂಡು ಬರುವಾಗ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
40ಕ್ಕೂ ಹೆಚ್ಚು ಜನರ ಗುಂಪು ಅಧಿಕಾರಿಗಳಿದ್ದ ಕಾರು ಅಡ್ಡಗಟ್ಟಿ ಗಲಾಟೆ ದಾಂಧಲೆ ನಡೆಸಿದ್ದು, ಮಗುವನ್ನು ಹೇಗೆ ಒಯ್ಯುತ್ತೀರಿ ಎಂದು ಅಧಿಕಾರಿಗಳಿಂದ ಶಿಶುವನ್ನು ಕಸಿದುಕೊಂಡ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಬ್ಬಂದಿ ಪ್ರವೀಣಕುಮಾರ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಕಸಿದು ನೂಕಿದ್ದಾರೆ. ಈ ವೇಳೆ ಪ್ರವೀಣ ಕೊರಳಲ್ಲಿದ್ದ 11 ಗ್ರಾಂ ಬಂಗಾರದ ಚೈನ್ ಹರಿದು ಬಿಸಾಡಿದ್ದಾರೆ.
ಅಧಿಕಾರಿಗಳ ಜೊತೆಗೆ ಬಂದಿದ್ದ ಇತರೆ ಕಾರ್ಯಕರ್ತರ ಕಾರ್‌ನ ಚಕ್ರದ ಗಾಳಿ ತೆಗೆದು ಅಟ್ಟಹಾಸ ಮಾಡಿದ್ದಾರೆ. ಅಧಿಕಾರಿಗಳ ಭದ್ರತೆಗೆ ಆಗಮಿಸಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಹಲ್ಲೆಕೋರರ ಅಟ್ಟಹಾಸಕ್ಕೆ ಅಸಹಾಯಕರಾಗಿದ್ದಾರೆ. ಸ್ಥಳದಿಂದ ಬಚಾವ್ ಆಗಿ ತಪ್ಪಿಸಿಕೊಂಡು ಬಂದ ಅಧಿಕಾರಿಗಳು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Poll (Public Option)

Post a comment
Log in to write reviews