
ಬೆಂಗಳೂರು: ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ನಟ ದೃವ ಸರ್ಜಾ ಅವರ ಜಿಮ್ ಟ್ರೈನರ್ ಮೇಲೆ ಬೈಕ್ ಸವಾರರು ನಡು ರಸ್ತೆಯಲ್ಲಿಯೇ ಅಡ್ಡಗಟ್ಟಿ ಗಂಭೀರವಾಗಿ ಹಲ್ಲೆ ಮಾಡಿ ಹೋಗಿರುವ ಘಟನೆ ಬೆಂಗಳೂರಿನ ಕೆ.ಆರ್. ರಸ್ತೆಯಲ್ಲಿ ನಡೆದಿದೆ.
ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಆಗಿರುವ ಬನಶಂಕರಿ ಮೂಲದ ಪ್ರಶಾಂತ್ ಅವರ ಮೇಲೆ ಅಪರಿಚಿತರಿಂದ ಹಲ್ಲೆಯಾಗಿದೆ. ನಟ ಧ್ರುವ ಸರ್ಜಾ ನಿವಾಸದ ಬಳಿಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬನಶಂಕರಿಯ ಕೆ.ಆರ್. ರಸ್ತೆಯಲ್ಲಿ, ಮೇ 26 ರಾತ್ರಿ 10.30ರ ಸುಮಾರಿಗೆ ಬೈಕ್‌ನಲ್ಲಿ ಬಂದು ಹಲ್ಲೆ ಮಾಡಿ ಹೋಗಿದ್ದಾರೆ. ಈ ಬಗ್ಗೆ ಜಿಮ್ ಟ್ರೈನರ್ ಪ್ರಶಾಂತ್ ಅವರು ಹತ್ತಿರದ ಬನಶಂಕರಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದರು. ಜೊತೆಗೆ, ಇಂದು ಠಾಣೆಗೆ ಬಂದು ಹಲ್ಲೆಯ ಬಗ್ಗೆ ವಿವರವಾಗಿ ದೂರು ದಾಖಲಿಸುವುದಾಗಿ ತಿಳಿಸಿದ್ದರು. ಅವರು ಬಂದು ದೂರು ನೀಡಿದ ಬೆನ್ನಲ್ಲಿಯೇ ತನಿಖೆಯನ್ನು ಕೈಗೊಳ್ಳಲಾಗಿದೆ.
ಈ ಬಗ್ಗೆ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಬಿ.ಜಗಲಾಸರ್ ಮಾತನಾಡಿದರು, ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ 10.30 ರ ಸುಮಾರಿಗೆ ಪ್ರಶಾಂತ್ ಮನೆಗೆ ಹೋಗುವಾಗ ಕೆ.ಆರ್ ರಸ್ತೆಯಲ್ಲಿ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ. ಸದ್ಯ ಯಾರು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹಲ್ಲೆಯ ಕಾರಣ ಎನ್ನುವ ಬಗ್ಗೆಯೂ ಸ್ಪಷ್ಟವಾದ ಮಾಹಿತಿಯಿಲ್ಲ, ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.
ಈಗ ಜಿಮ್ ಟ್ರೈನರ್ ಪ್ರಶಾಂತ್ ಅವರು ಈ ಘಟನೆಯ ಬಗ್ಗೆ ಉಲ್ಟಾ ಹೊಡೆದಿದ್ದಾರೆ. ಈ ಬಗ್ಗೆ ಮಾತನಾಡಿ, ಅವರು ನನ್ನ ಮೇಲೆ ಹಲ್ಲೆ ನಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳಿಕೊಳ್ಳದೇ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂಬಂತೆ ಗೋಚರವಾಗುತ್ತಿದೆ. ಆದರೆ, ಹಲ್ಲೆಗೊಳಗಾದ ಪ್ರಶಾಂತ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಡಿಸಿಪಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆದರೂ ಪ್ರಶಾಂತ್ ತಮ್ಮ ಮೇಲೆ ಹಲ್ಲೆಯಾಗಿಲ್ಲ ಎಂದು ಹೇಳುವುದರ ಹಿಂದಿನ ಉದ್ದೇಶವೇನು ಎಂಬುದು ಮಾತ್ರ ಅಥ೯ವಾಗುತ್ತಿಲ್ಲ.
Poll (Public Option)

Post a comment
Log in to write reviews