ಹಾವೇರಿ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಪ್ಪಟ ಅಭಿಮಾನಿಯೋರ್ವರು ನಿರ್ಮಿಸಿರುವ 'ಪುನೀತ್ ದೇವಸ್ಥಾನ'ವನ್ನು ಇಂದು ಅಶ್ವಿನಿ ಪುನೀತ್ ರಾಜ್‍ಕುಮಾರ್ ಉದ್ಘಾಟಿಸಿದ್ದಾರೆ. ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಈ ದೇವಾಲಯವಿದೆ. ಪ್ರಕಾಶ್ ಎಂಬ ಅಪ್ಪು ಅಭಿಮಾನಿಯ ಮನೆಯೆದುರು ಈ ದೇವಸ್ಥಾನ ನಿರ್ಮಿಸಲಾಗಿದೆ.
ಅಭಿಮಾನಿ ಮಗಳ ನಾಮಕರಣ: ಜನಮೆಚ್ಚಿದ ನಟರಿಂದ ತಮ್ಮ ಮಕ್ಕಳ ನಾಮಕರಣ ಮಾಡಿಸಬೇಕೆಂಬುದು ಅದೆಷ್ಟೋ ಅಭಿಮಾನಿಗಳ ಆಶಯ. ಅದರಂತೆ ಅಪ್ಪು ಅಭಿಮಾನಿ ಪ್ರಕಾಶ್ ಮತ್ತು ದೀಪಾ ದಂಪತಿಯ ಮಗಳಿಗೆ 'ಅಪೇಕ್ಷಾ' ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ನಾಮಕರಣ ಮಾಡಿದ್ದಾರೆ. ಅಪ್ಪು ಕೆಲಸಗಳನ್ನು ಸದ್ಯ ಅಶ್ವಿನಿಯವರು ನಡೆಸಿಕೊಂಡು ಹೋಗುತ್ತಿದ್ದಾರೆ. ಅದರಂತೆ, ದೇಗುಲ ನಿರ್ಮಿಸಿರುವ ಅಭಿಮಾನಿ ಪ್ರಕಾಶ್ ಪುತ್ರಿ ಮಗಳ ನಾಮಕರಣ ಮಾಡುವ ಮೂಲಕ ಅಶ್ವಿನಿ ತಮ್ಮ ಪತಿಯಂತೆ ಅಭಿಮಾನಿಯ ಕನಸು ನನಸು ಮಾಡಿದ್ದಾರೆ.
ಅಶ್ವಿನಿ ಭಾವುಕ: ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್, ಅಭಿಮಾನಿಗಳಿಗೆ ನಾನೆಂದಿಗೂ ಚಿರಋಣಿ. ಅಭಿಮಾನಿಯ ಸ್ವಂತ ಜಾಗದಲ್ಲಿ ಅಪ್ಪು ದೇವಸ್ಥಾನ ನಿರ್ಮಾಣಗೊಂಡಿದೆ. ಇಂಥ ಅಭಿಮಾನಿ ಇರುವುದು ನಮ್ಮ ಪುಣ್ಯ. ಅಪ್ಪು ಅವರ ದೇವಸ್ಥಾನ ನಿರ್ಮಾಣಗೊಂಡಿರುವುದು ಬಹಳ ಖುಷಿ ತಂದಿದೆ ಎಂದು ಭಾವುಕರಾದರು.
ಕಾರ್ಯಕ್ರಮದಲ್ಲಿ ಹೊಸರಿತ್ತಿಯ ಗುದ್ದಲೀಶ್ವರ ಸ್ವಾಮೀಜಿ ಭಾಗಿಯಾಗಿದ್ದರು. ಅಭಿಮಾನಿ ಸ್ವಂತ ಹಣ ಹಾಕಿ ದೇಗುಲ ನಿರ್ಮಿಸಿದ್ದಾರೆ. ನಿರ್ಮಾಣ ಕಾರ್ಯಕ್ಕೆ 10 ಲಕ್ಷ ರೂಪಾಯಿ ವೆಚ್ಚವಾಗಿದೆ. ವಿವಿಧ ಕಲಾತಂಡಗಳು, ಕುಂಬಮೇಳ ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದವು. ಜಿಲ್ಲೆಯ ಅಪ್ಪು ಅಭಿಮಾನಿಗಳು ಭಾಗಿಯಾಗುವ ಮೂಲಕ ಸಂಭ್ರಮವನ್ನು ದ್ವಿಗುಣಗೊಳಿಸಿದರು.
ಈ ಹಿಂದೆ ಮಾತನಾಡಿದ್ದ ಕಾರ್ಯಕ್ರಮ ಸಂಘಟಕರು ಹಾಗೂ ಅಪ್ಪು ದೇವಸ್ಥಾನ ನಿರ್ಮಿಸಿರುವ ಪ್ರಕಾಶ್, ಸೆಪ್ಟೆಂಬರ್ 26ರಂದು ಬೆಳಗ್ಗೆ 11 ಗಂಟೆಗೆ ದೇವಸ್ಥಾನದ ಉದ್ಘಾಟನೆ ಹಾಗೂ ಪುನೀತ್ ರಾಜ್ಕುಮಾರ ಪುತ್ಥಳಿ ಅನಾವರಣ ನಡೆಯಲಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಪುತ್ಥಳಿ ಅನಾವರಣ ನಂತರ ಮಗಳ ನಾಮಕರಣ ಮಾಡಲಿದ್ದಾರೆ. ಬಳಿಕ, ಶಾಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಕ್ಕೆ ಚಿತ್ರರಂಗದ ಹಲವು ನಟ, ಸಹನಟರು, ರಾಜಕಾರಣಿಗಳು ಮತ್ತು ಹಲವು ಮಠಾಧೀಶರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭರದ ಸಿದ್ಧತಾ ಕಾರ್ಯಗಳು ನಡೆದಿವೆ ಎಂದು ತಿಳಿಸಿದರು.
Post a comment
Log in to write reviews