ಕೊಡಗು : ಕೇವಲ 3ಸಾವಿರ ಹಣ ಕೇಳಿದಕ್ಕೆ ಕೊಡಲಿಯಿಂದ ಇಬ್ಬರು ಸ್ನೇಹಿತರು ಕೊಚ್ಚಿ ದಾರುಣವಾಗಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ. ಕಳೆದ ರಾತ್ರಿ ಕೊಡಲಿಯಿಂದ ಕೊಚ್ಚಿ ಇಬ್ಬರನ್ನ ಕೊಲೆ ಮಾಡಲಾಗಿದೆ. ಇನ್ನೂ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವನ ತಲೆಯ ಮೇಲೆ ಕೊಡಲಿ ತೂರಿದೆ.
ಬಸವೇಶ್ವರ ಬಡವಾಣೆಯ ಜೋಸೆಫ್, ಅವನ ಪಕ್ಕದ ಮನೆಯ ಗಿರೀಶ್ ಮತ್ತು ವಸಂತ್ ಎಲ್ಲರೂ ಸ್ನೇಹಿತರು. ಕಳೆದ 15-20 ವರ್ಷಗಳಿಂದ ಎಲ್ಲರೂ ಒಟ್ಟಿಗೇ ಕೆಲಸ ಮಾಡ್ತಾ ಇದ್ದವರು. ಆದ್ರೆ ಇತ್ತೀಚೆಗೆ ಕೆಲ ತಿಂಗಳಿನಿಂದ ಜೋಸೆಫ್ ಮತ್ತು ಗಿರೀಶನ ಮಧ್ಯೆ ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಭಿನ್ನಾಭಿಪ್ರಾಯ ತಲೆದೋರಿತ್ತು. ಗಿರೀಶ್, ಜೋಸೆಫ್ಗೆ 3 ಸಾವಿರ ರೂ ಕೊಡಬೇಕಿತ್ತು. ಹಲವು ಬಾರಿ ಹಣ ಕೇಳಿದ್ರೂ ಕೊಟ್ಟಿರಲಿಲ್ಲ. ಇದೇ ವಿಚಾರದಲ್ಲಿ ಜಗಳವಾಗಿ 15 ದಿನಗಳಿಂದ ಗಿರೀಶ, ಜೋಸೆಫ್ ನ ಜೊತೆ ಕೆಲಸಕ್ಕೆ ಹೋಗುವುದನ್ನ ನಿಲ್ಲಸಿದ್ದ. ನಿನ್ನೆ ಮಧ್ಯಾಹ್ನ ಕೂಡ ಜೋಸೆಫ್, ಗಿರೀಶನ ಬಳಿ ಹಣ ಕೊಡವಂತೆ ಕೇಳಿದ್ನಂತೆ. ಕೊಡ್ತೀನಿ ಅಂತ ಸಮಾಧಾನದಿಂದಲೇ ಹೇಳಿದ್ದನಂತೆ. ಆದ್ರೆ ನಿನ್ನೆ ಸಂಜೆ 7.30ರ ಸುಮಾರಿಗೆ ಜೋಸೆಫ್, ವಸಂತ್ ಮತ್ತು ಸಂಜು ಕೆಲಸ ಮುಗಿಸಿ ಆಟೋದಲ್ಲಿ ಮನೆಯ ಬಳಿ ಬಂದಿದ್ದಾರೆ.
ಇದೇ ಸಂದರ್ಭ ಕೊಡಲಿ ಹಿಡಿದು ಗಿರೀಶ್ ಆಟೋ ರಿಕ್ಷಾ ಹಿಂದೆ ಬಂದಿದ್ದು ಇವರಿಗೆ ಗೊತ್ತೇ ಆಗಲಿಲ್ಲ. ಜೋಸೆಫ್ ಆಟೋದಿಂದ ಇಳಿದು ಶರ್ಟ್ ಬಿಚ್ಚಿ ಆಟೋ ಒಳಗೆ ಹಾಕುತ್ತಿದ್ದಂತೆ ಹಿಂಬದಿಯಿಂದ ಗಿರೀಶ್ ಕೊಡಲಿ ಬೀಸಿಯೇ ಬಿಟ್ಟಿದ್ದಾನೆ.
ಕುತ್ತಿಗೆ ಹಿಂಬದಿಗೆ ಬಲವಾದ ಪೆಟ್ಟುಬಿದ್ದು ಜೋಸೆಫ್ ಕುಸಿದಿದ್ದಾನೆ. ಅಲ್ಲೂ ಬಿಡದೆ ಬಿದ್ದಲ್ಲೆಗೆ ಮತ್ತೆ ಮುರು ಬಾರಿ ಕೊಚ್ಚಿದ್ದಾನೆ. ಇದೇ ಸಂದರ್ಭ ಆಟೋದಲ್ಲಿದ್ದ ವಸಂತ ಅಲಿಯಾಸ್ ಪುಟ್ಟ ಗಿರೀಶನನ್ನ ತಡೆಯಲು ಹೋಗಿದ್ದಾನೆ. ಆದ್ರೆ ಹುಚ್ಚನಂತಾಗಿದ್ದ ಗಿರೀಶ್, ವಸಂತನ ತಲೆಗೆ ಒಂದೇ ಏಟಿಗೆ ಕೊಡಲಿ ಬೀಸಿದ್ದಾನೆ. ಅದೆಷ್ಟು ರಣ ಭೀಕರವಾಗಿದೆ ಅಂದ್ರೆ ಆ ಕೊಡಲಿ ನೇರವಾಗಿ ವಸಂತನ ತಲೆಯೊಳಗೆ ಹೂತು ಹೋಗಿದೆ. ಅಷ್ಟರಲ್ಲಿ ಎಲ್ಲರೂ ಬಂದು ಗಿರೀಶನನ್ನ ಎಳೆದು ಹಾಕಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ರಕ್ತದ ಹೊಳೆಯೇ ಹರಿದಿದೆ. ಒಂದೆಡೆ ಜೋಸೆಫ್ ಹೆಣವಾದ್ರೆ, ಪಕ್ಕದ್ದಲ್ಲೇ ಅಮಾಯಕ ವಸಂತ್ ತಲೆಯಲ್ಲಿ ಕೊಡಲಿ ಹೊತ್ತು ಬಿದ್ದಿದ್ದ. ಎಲ್ಲರೂ ಸೇರಿ ವಸಂತನನ್ನ ಮಡಿಕೇರಿ ಆಸ್ಪತ್ರೆಗೆ ದಾಖಲಿಸ್ತಾರೆ. ಆಸ್ಪತ್ರೆಯಲ್ಲಿ ಕೊಡಲಿ ತೆಗೆಯುತ್ತಿದ್ದಂತೆ ವಸಂತ ಕೂಡ ಉಸಿರು ಚೆಲ್ಲಿದ್ದಾನೆ.
Post a comment
Log in to write reviews