ಶಿರಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅನುವು: ಹೆದ್ದಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವರು
ಹಾಸನ: ವರುಣಾರ್ಭಟಕ್ಕೆ ಶಿರಡಿ ಘಾಟಿಯಲ್ಲಿ ಸತತ ಭೂಕುಸಿತ ಉಂಟಾಗುತ್ತಿದ್ದು, ಕಳೆದ ರಾತ್ರಿ ಮತ್ತೆ ಭೂಕುಸಿತ ಸಂಭವಿಸಿತ್ತು. ಸದ್ಯಕ್ಕೆ ಮುಚ್ಚಿ ಹೋಗಿದ್ದ ರಸ್ತೆಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಬೆಂಗಳೂರು- ಮಂಗಳೂರು (Bangalore- Mangalore) ಸಂಪರ್ಕಿಸುವ ಪ್ರಮುಖ ಶಿರಾಡಿ ಘಾಟಿ (Shiradi Ghat) ಸಕಲೇಶಪುರ ದೊಡ್ಡತಪ್ಲೆಯಲ್ಲಿ ನಿನ್ನೆ ರಾತ್ರಿ ಮತ್ತೆ ಅಂದರೆ ಮೂರನೇ ಬಾರಿಗೆ ಗುಡ್ಡ ಕುಸಿದಿತ್ತು. ಇದರಲ್ಲಿ ಹಲವಾರು ವಾಹನಗಳು ಸಿಲುಕಿಕೊಂಡಿದ್ದವು, ಆದರೆ ಅದೃಷ್ಟವಶಾತ್ ಯಾವುದೇ ಜೀವಹಾನಿ ಆಗಿರಲಿಲ್ಲ. ಇಲ್ಲಿ ತಾತ್ಕಾಲಿಕವಾಗಿ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಎನ್‌ಹೆಚ್‌ಎಐನ ಅಧಿಕಾರಿಗಳು ಸ್ಥಳದಲ್ಲಿದ್ದು ರಸ್ತೆ ಮೇಲೆ ಕುಸಿತವಾಗಿರುವ ಮಣ್ಣನ್ನು ಮಾತ್ರ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ವಾಹನ ಸವಾರರು ಮಾತ್ರ ಜೀವಭಯದಿಂದಲೇ ಸಂಚರಿಸಬೇಕಿದೆ.
ಒಂದು ವಾರದ ಹಿಂದೆ ದೊಡ್ಡತಪ್ಲು ಬಳಿ ರಸ್ತೆಗೆ ಗುಡ್ಡದಿಂದ ಮಣ್ಣು ಕುಸಿಯಲು ಆರಂಭಿಸಿದೆ. ಆಗಲೇ ಸ್ಥಳೀಯರು ಎಚ್ಚರಿಸಿದ್ದರು. ಎರಡು ದಿನ ಹಿಂದೆ ಇಲ್ಲಿ ರಸ್ತೆಗೆ ಗುಡ್ಡ ದೊಡ್ಡ ಪ್ರಮಾಣದಲ್ಲಿ ಕುಸಿದಿತ್ತು. ಎರಡು ಕಾರುಗಳು, ಲಾರಿ ಹಾಗೂ ಟ್ಯಾಂಕರ್ ಸಿಲುಕಿಕೊಂಡಿದ್ದವು. ಪ್ರಯಾಣಿಕರನ್ನು ಪಾರು ಮಾಡಿ ವಾಹನಗಳನ್ನು ಈಚೆಗೆ ತೆಗೆಯಲಾಗಿತ್ತು. ನಿನ್ನೆ ಬೆಳಗ್ಗೆಯುಷ್ಟೇ ರಸ್ತೆ ಸಂಚಾರ ಮುಕ್ತಗೊಂಡಿತ್ತು. ನಿನ್ನೆ ಮಧ್ಯಾಹ್ನ ಕಂದಾಯ ಸಚಿವ ಕೃಷ್ಣಭೈರೇಗೌಡರು ಇಲ್ಲಿಗೆ ಭೇಟಿ ನೀಡಿ ಅವಲೋಕಿಸಿದ್ದರು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ನಂತರ ನಿನ್ನೆ ರಾತ್ರಿ ಇದೇ ಸ್ಥಳದಲ್ಲಿ ಮತ್ತೆ ಗುಡ್ಡ ಕುಸಿದಿದೆ. ಮಣ್ಣಿನಡಿ ಹಲವು ವಾಹನಗಳು ಸಿಲುಕಿಕೊಂಡವು. ಗುಡ್ಡ ಕುಸಿತದ ರಭಸಕ್ಕೆ ಕಂಟೇನರ್ ಒಂದು ಪಲ್ಟಿಯಾಗಿದೆ. ನಂತರ ಇಲ್ಲಿ ಪೂರ್ತಿಯಾಗಿ ರಸ್ತೆ ಸಂಚಾರ ಬಂದ್ ಮಾಡಿ ಹಾಸನ ಜಿಲ್ಲಾಧಿಕಾರಿ ಸತ್ಯಭಾಮ ಆದೇಶ ನೀಡಿದ್ದರು. ನಿರಂತರ ಗುಡ್ಡ ಕುಸಿಯುತ್ತಿರುವುದರಿಂದ ಜಿಲ್ಲಾಡಳಿತ ಈ ಆದೇಶ ನೀಡಿದ್ದು, ಬದಲಿ ಮಾರ್ಗದಲ್ಲಿ ಸಂಚಾರ ಮಾಡುವಂತೆ ಆದೇಶಿಸಿತ್ತು.
ಕಂದಾಯ ಸಚಿವರ ಕ್ಲಾಸ್ :
ನಿನ್ನೆ ಗುಡ್ಡ ಕುಸಿತ ಸ್ಥಳಕ್ಕೆ ಸಚಿವರ ಭೇಟಿ ನೀಡಿದ್ದ ಸಚಿವ ಕೃಷ್ಣೆಬೈರೇಗೌಡ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ʼಇಷ್ಟೆಲ್ಲಾ ಸಮಸ್ಯೆ ಆಗಿದೆ, ನಮ್ಮ ಇಡೀ ಅಧಿಕಾರಿ ವರ್ಗ ಇಲ್ಲಿ ಸಮಸ್ಯೆ ಆಗಬಾರದು ಎಂದು ಎಚ್ಚರಿಕೆ ವಹಿಸಿದೆ. ನೀವು ಜನರಿಗೆ ಸಮಸ್ಯೆ ಆಗದಂತೆ ಏನು ಎಚ್ಚರಿಕೆ ವಹಿಸಿದ್ದೀರಿ? ಬೇಕಾಬಿಟ್ಟಿಯಾಗಿ ರಸ್ತೆಯ ಬದಿಗಳನ್ನು ಕಡಿದು ತೆಗೆದಿದ್ದೀರಾʼ ಎಂದು ಕಿಡಿ ಕಾರಿದರು. ʼಇದು ರಾಜ್ಯದ ಪ್ರಮುಖ ರಸ್ತೆ. ಬಂದ್ ಮಾಡಲು ಆಗುವುದಿಲ್ಲ. ಮೊದಲೇ ಜಾಗೃತೆ ವಹಿಸಬೇಕಿತ್ತಲ್ಲವೇʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ʼನಮ್ಮ ಅದೃಷ್ಟ ಯಾರಿಗೆ ಏನೂ ತೊಂದರೆ ಆಗಿಲ್ಲ. ಗುಡ್ಡ ಕುಸಿದು ಮಣ್ಣಿನ ಅಡಿ ಸಿಲುಕಿದ್ದ ವಾಹನಗಳನ್ನ ನಮ್ಮ ಸಿಬ್ಬಂದಿ ಹೊರ ತೆಗೆದಿದ್ದಾರೆ. ಶಿರಾಡಿ ಘಾಟ್ ಸಮಸ್ಯೆ ಇಂದು ನೆನ್ನೆಯದಲ್ಲ. ಇದು ಹಲವು ವರ್ಷಗಳಿಂದ ಸಮಸ್ಯೆ ಇದೆ. ಗುಡ್ಡಗಳನ್ನು ನೆರವಾಗಿ ಕಡಿದಿದ್ದರಿಂದ ಸಮಸ್ಯೆ ಆಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ನಾವು ಸಿಎಂ ಅವರಿಂದಲೂ ಕೂಡ ಪತ್ರ ಬರೆಸುತ್ತೇವೆ ಎಂದಿದ್ದರು ಸಚಿವರು.
ʼಸೂಕ್ತ ಬಂದೋಬಸ್ತ್ ಮಾಡದೆ ರಸ್ತೆ ಮಾಡಿ ಸಮಸ್ಯೆ ಆಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಜಿಯೊಲಜಿಕಲ್ ಸರ್ವೆ ಆಫ್ ಇಂಡಿಯಾದಿಂದ ವರದಿ ಪಡೆಯುತ್ತೇವೆ. ಈಗ ಏನಾಗಿದೆ, ಯಾವ ರೀತಿ ಆಗಬೇಕು ಎಂದು ವರದಿ ಪಡೆಯುತ್ತೇವೆ. ಸಿಎಂ ಮೂಲಕ ಎನ್ಎಚ್ಎಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲು ತಾಕೀತು ಮಾಡುತ್ತೇವೆ. ನಮ್ಮ ರಾಜ್ಯದ ಹಲವು ಕಡೆ ಗುಡ್ಡ ಕುಸಿತ ಆಗಿದೆ. ಒಟ್ಟು 300 ಕೋಟಿ ವೆಚ್ಚದಲ್ಲಿ ಭೂ ಕುಸಿತ ಆಗೋ ಸಾಧ್ಯತೆ ಕಡೆಗಳಲ್ಲಿ ಕಾಮಗಾರಿ ಮಾಡುತ್ತೇವೆ. ಈ ಬಗ್ಗೆ ಶೀಘ್ರವಾಗಿ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಪಡೆದು ಕೂಡಲೆ ತಡೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.
Post a comment
Log in to write reviews