ಚಿತ್ರರಂಗದಲ್ಲಿ ಸಾಮಾನ್ಯವಾಗಿ ಅನೇಕರು ತಮ್ಮ ಮಕ್ಕಳನ್ನು ಬೇರೆ ಯಾವುದೋ ಲೋಕದಲ್ಲಿ ಜನ್ಮ ಪಡೆದು ಬಂದವರಂತೆ ಬೆಳೆಸುವ ಸಂಪ್ರದಾಯ ಇದೆ. ಹೈ ಫೈ ಜೀವನ, ಮೋಜು ಮಸ್ತಿಯಲ್ಲಿಯೇ ಇವರ ಮಕ್ಕಳು ಕಳೆದು ಹೋಗುತ್ತಾರೆ. ಇದರಿಂದ ಸಹಜವಾಗಿ ಬಾಲ್ಯದಿಂದ ವಂಚಿತರಾಗುತ್ತಾರೆ. ಇನ್ನೂ ಇವರನ್ನು ಹೆತ್ತವರು ತಮ್ಮ ಮಕ್ಕಳು ಹೋದಲ್ಲಿ ಬಂದಲ್ಲಿ, ಕುಂತಲ್ಲಿ ನಿಂತಲ್ಲಿ ಸೇವೆ ಮಾಡಲು ಆಳುಗಳನ್ನು ನೀಡಿ, ಹಣದ ಅಮಲನ್ನೇರಿಸಿ, ಬೇಡದ ತೆವಲುಗಳನ್ನು ಇವರಿಗೆ ಮೆತ್ತಿ ತಮ್ಮ ಮಕ್ಕಳ ಸುಂದರ ಬದುಕನ್ನು ತಾವೇ ಹಾಳು ಮಾಡುತ್ತಾರೆ. ತಮ್ಮ ಮಗಳು ಆರಾಧ್ಯ ಅವರ ಬದುಕನ್ನು ಐಶ್ವರ್ಯ ರೈ ಇದೇ ರೀತಿ ಹಾಳು ಮಾಡುತ್ತಿದ್ದಾರಾ ಎಂಬ ಅನುಮಾನ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ.
ಹೌದು, ಆರಾಧ್ಯಗೆ ಸಹಜ ಬಾಲ್ಯದ ಆನಂದವನ್ನು ಅನುಭವಿಸಲು ಐಶ್ವರ್ಯ ರೈ ಮೊದಲಿಂದನೂ ಬಿಡಲೇ ಇಲ್ಲ. ಆಕೆಯನ್ನು ಸ್ವತಂತ್ರ್ಯವಾಗಿ ಬಿಡದೇ ತಮ್ಮ ಮಗಳ ಜೊತೆ ಐಶ್ವರ್ಯ ರೈ ಅಂಟಿಕೊಂಡು ತಿರುಗಾಡುವುದನ್ನೇ ರೂಡಿ ಮಾಡಿಕೊಂಡು ಬಂದರು. ತನ್ನ ಅಮ್ಮನ ವೃತ್ತಿಯೇನು ಎನ್ನುವುದು ಆರಾಧ್ಯಗೆ ಇನ್ನೂ ಅರ್ಥವಾಗುವ ಮುನ್ನವೇ ಆಕೆಯನ್ನು ಪ್ರತಿಷ್ಠಿತ ಕಾನ್ ಚಿತ್ರೋತ್ಸವಕ್ಕೆ ಕರೆದೊಯ್ದು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
ಇನ್ನೂ.. ನಿಮಗೆ ಗೊತ್ತು. ಬಾಲಿವುಡ್ನಲ್ಲಿ ಸ್ಟಾರ್ಗಳು ಮನೆಯಾಚೆ ಬಂದರೆ ಸಾಕು, ಅಡಿಗಡಿಗೂ ಕ್ಯಾಮರಾ ಹಿಡಿದು ಒಂದು ವರ್ಗ ಕಣ್ಮುಂದೆ ಪ್ರತ್ಯಕ್ಷವಾಗುತ್ತಾನೇ ಇರುತ್ತೆ. ಮೇಲಿಂದ ಮೇಲೆ ಫೋಟೋ ಕ್ಲಿಕಿಸುತ್ತೆ. ಕೇವಲ ಸೆಲೆಬ್ರಿಟಿಗಳ ಫೋಟೋಗಳನ್ನಷ್ಟೇ ಕ್ಲಿಕಿಸದೇ ಅವರ ಎಳೆ ವಯಸಿನ ಮಕ್ಕಳ ಫೋಟೋವನ್ನು ಕೂಡ ಈ ಬಣ ತೆಗೆಯುತ್ತೆ. ಇದರಿಂದ ಅನುಷ್ಕಾ ಶರ್ಮಾ ಅವರಿಂದ ಹಿಡಿದು ಆಲಿಯಾ ಭಟ್ ವರೆಗೆ ಅನೇಕರಿಗೆ ಕಿರಿಕಿರಿಯಾಗಿದ್ದು ಇದೆ. ನಮ್ಮ ಮಕ್ಕಳ ಫೋಟೋವನ್ನು ತೆಗೆಯಬೇಡಿ ಎಂದು ಈ ಪಾಪರಾಜಿಗಳಿಗೆ ಇವರೆಲ್ಲ ಮನವಿ ಮಾಡಿಕೊಂಡಿದ್ದು ಇದೆ. ಆದರೆ ಐಶ್ವರ್ಯ ರೈ ಇದಕ್ಕೆ ತದ್ವಿರುದ್ದ. ಆರಾಧ್ಯ ಚಿಕ್ಕವಳಾಗಿದ್ದಾಗಲೇ ಐಶ್ವರ್ಯ ರೈ ಕ್ಯಾಮರಾ ಕಣ್ಣಿಗೆ ತಮ್ಮ ಮಗಳು ಬೀಳುವಂತೆ ನೋಡಿಕೊಂಡರು. ಆರಾಧ್ಯ ಶಾಲೆಗೆ ಕಲಿಯಲು ಹೋಗ್ತಾರಾ ಇಲ್ಲವಾ ಎನ್ನುವ ಅನುಮಾನ ಮೂಡುವಷ್ಟು ಎಲ್ಲೆಂದರಲ್ಲಿ ಕರೆದುಕೊಂಡು ತಿರುಗಿದರು.
ಅದರಲ್ಲಿಯೂ ಕಳೆದು ಒಂದು ಒಂದೂವರೆ ತಿಂಗಳಿಂದ ಐಶ್ವರ್ಯ ರೈ ಅವರನ್ನು ಆರಾಧ್ಯ ನೆರಳಿನಂತೆ ಹಿಂಬಾಲಿಸುತ್ತಿದ್ದಾರೆ. ಅದು ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ ಇರಲಿ ಅಥವಾ ಮೊನ್ನೆ ಮುಕ್ತಾಯವಾದ ಪ್ಯಾರಿಸ್ ಫ್ಯಾಷನ್ ವೀಕ್ ಇರಲಿ, ಆರಾಧ್ಯ ಅವರನ್ನು ತಮ್ಮ ಸೆರಗಿನಡಿಯಲ್ಲಿ ಕಟ್ಟಿಕೊಂಡೇ ಐಶ್ವರ್ಯ ರೈ ತಿರುಗಾಡಿದ್ದಾರೆ. ಹೀಗಾಗಿಯೇ ತಮ್ಮ ಅಸಮಾಧಾನ ಹೊರ ಹಾಕುತ್ತಿರುವ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಐಶ್ವರ್ಯ ರೈ ಅವರಿಗೆ ಪೇರೆಂಟಿಂಗ್ ಪಾಠ ಮಾಡುತ್ತಿದ್ದಾರೆ. ಆರಾಧ್ಯಗೆ ಅವರದ್ದೇ ಆದ ಬದುಕು ಇದೆ ಅದನ್ನು ಆಕೆಗೆ ಬದುಕಲು ಬಿಡಿ ಎಂದು ಐಶ್ವರ್ಯ ರೈಗೆ ಹೇಳುತ್ತಿದ್ದಾರೆ. ಕನ್ನಡದ ಹಿರಿಯ ನಟಿ ಮಾಳವಿಕಾ ಅವಿನಾಶ್ ಕೂಡ ಐಶ್ವರ್ಯ ರೈಗೆ ಇದೇ ಪಾಠವನ್ನು ಮಾಡಿದ್ದಾರೆ. ಮಕ್ಕಳನ್ನು ಹ್ಯಾಂಡ್ ಬ್ಯಾಗ್ನಂತೆ ಬಳಸುವುದು ಎಂಥ ಸಂಸ್ಕ್ರತಿ ಎಂಬ ಪ್ರಶ್ನೆಯನ್ನು ಮಾಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾಗಿ ಬರೆದುಕೊಂಡಿರುವ ಮಾಳವಿಕಾ ಅವಿನಾಶ್, ''ಆಫೀಸಿಗೆ,ಆಫೀಸ್ ಟೂರಿಗೆ ಹೋದಾಗ ಮಕ್ಕಳನ್ನು ಕರ್ಕೊಂಡು ಹೋದರೆ ಸುಮ್ಮನ್ನಿರುತ್ತಾರೆಯೇ ಬಾಸು? ಮಿಕ್ಕವರಿಗೆ ಆಫೀಸಿದ್ದ ಹಾಗೆ ನಮಗೆ ಶೂಟಿಂಗ್, ಕಾರ್ಯಕ್ರಮಗಳು, ಫೋಟೊ ಶೂಟ್ ಇಂತಹವೆಲ್ಲಾ! ನಿಮ್ಮ ಯಾವುದೋ ಅಸುರಕ್ಷತೆಯ ಕಾರಣ, ಹರೆಯದ ಹುಡುಗಿಯರನ್ನು ಕರ್ಕೊಂಡು ಹೋಗೊದ್ರಿಂದ ಆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ತಾವು ತಮ್ಮ ತಾಯಿಯಂತೆ ತಲೆಯೊಳಗೆ ಸ್ಟಾರ್ ಆಗುತ್ತಾರೆ ಆ ಮಕ್ಕಳು. ತಾಯಿ ಹಾಕಿದ ಪರಿಶ್ರಮ, ಪಟ್ಟ ಕಷ್ಟ ಯಾವುದೂ ಆ ಮಕ್ಕಳಿಗೆ ಗೊತ್ತಿರುವುದಿಲ್ಲ. ಗೊತ್ತಾಗುವುದು ಬೇಡ. ಈ ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆಯೇ ತಾವೂ ಹೀರೋಯಿನ್ ಆಗುವ ಕನಸು ಕಾಣುತ್ತಾರೆ. ತನ್ನ ಪೊಸಿಶನ್ನನ್ನು ಬಳಸಿಕೊಂಡು, ಆ ತಾಯಿ ಒಂದು ಪಿಕ್ಚರನ್ನೂ ಆ ಮಗ/ಮಗಳಿಗೆ ಕೊಡಿಸಿಬಿಡಬಹುದೇನೊ. ಶೂಟಿಂಗಲ್ಲಿ ತಾಯಿ ಮಾಡಿರುವ ಐವತ್ತು ಸಿನಿಮಾಗಳನ್ನು ತಾನೆ ಮಾಡಿದ್ದೇನೇನೊ ಎಂಬ ಆಟಿಟ್ಯೂಡ್. ಜತೆಗೆ ಏಳೆಂಟು ಜನ, ಕೈಗೊಬ್ಬ ಕಾಲ್ಗೊಬ್ಬ. ತಾಯಿ ಮೊದಲ ಚಿತ್ರ ಮಾಡುವಾಗ ಹಾಕಿದ್ದ ಹರಕಲು ಬಟ್ಟೆಚಪ್ಪಲಿ, ಯಾವುದೂ ಈ ಮಕ್ಕಳಿಗೆ ಗೊತ್ತಿರುವುದಿಲ್ಲ'' ಎಂದಿದ್ದಾರೆ. ಇನ್ನೂ ''ತೆರೆಯ ಮೇಲೆ ಕಾಣುತ್ತಿದ್ದಂತೆಯೇ, ಅಯ್ಯೊ, ಇವಳು ತಾಯಿಯಂತೆ ಎಲ್ಲಿದ್ದಾಳೆ ಎಂಬ ಕಂಪ್ಯಾರಿಸನ್ ಶುರುವಾಗುತ್ತೆ. ಅವಳೆಂತಹ ಸುಂದರಿ, ಡ್ಯಾನ್ಸರ್, ಪರ್ಫಾಮರ್...ಮಗಳೇನೂ ಸುಖ ಇಲ್ಲ ಎಂದು ಸಾರಾಸಗಟಾಗಿ ತೆಗೆದು ಹಾಕಿಬಿಡುತ್ತಾರೆ ಪ್ರೇಕ್ಷಕರು. ಪಿಕ್ಚರ್ ಓಡಿದರೆ ಸರಿ. ಓಡದೆ ಹೋದರೆ, ಮಂದಿನ ಹತ್ತು, ಇಪ್ಪತ್ತು ಮೂವತ್ತು ವರ್ಷಗಳು, ತಾನ್ಯಾಕೆ ತಾಯಿಯಂತಿಲ್ಲ, ತಾಯಿಯಂತೆ ಸ್ಟಾರಾಗಲಿಲ್ಲ ಎಂಬ ಕೊರಗು. ಸ್ಟಾರ್ ಮಕ್ಕಳಾಗಿ ಹುಟ್ಟುವುದು ಅದೃಷ್ಟವೇ. ಆದರೆ ಅದನ್ನೇ ಬದುಕೆಂದುಕೊಳ್ಳಬಾರದಿರಬೇಕು ಮಕ್ಕಳು. ತಮ್ಮದೊಂದು ವ್ಯಕ್ತಿತ್ವ, ಬದುಕು, ಗುರಿ ಇವೆಲ್ಲವೂ ಇರ ಬೇಕೆಂಬುದನ್ನು ಸ್ಟಾರ್ ತಂದೆ ತಾಯಂದಿರೂ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಎಲ್ವರಂತೆ ಸಾಮಾನ್ಯ ಬದುಕನ್ನು ಬದುಕುವ ಅವಕಾಶ ಮಾಡಿಕೊಡಬೇಕು'' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಜಾಕಿ ಚಾನ್ ಉದಾಹರಣೆಯನ್ನು ನೀಡಿರುವ ಮಾಳವಿಕಾ ಅವಿನಾಶ್, ''ಜ್ಯಾಕೀ ಚ್ಯಾನ್, ತಾನು ಮಗನನ್ನು ಬೆಳೆಸುವುದರಲ್ಲಿ ಸೋತಿದ್ದೇನೆ ಎಂಬುದನ್ನು ಎಲ್ಲೊ ಹೇಳಿಕೊಂಡದ್ದನ್ನು ನೋಡಿದ ನೆನಪು. ಜೇಸೀ ಚ್ಯಾನಿಗೀಗ 41ವರ್ಷ. ಬದುಕಲ್ಲಿ ಏನು ಆಗಿಲ್ಲ, ಸೋತ ನಟ ಅಷ್ಟೆ. ಜಾಕಿ ಎಂಥ ಲೆಜೆಂಡ್, ಮಗ ನೋಡಿ. ಸ್ಟಾರ್ ಮಕ್ಕಳು ಸ್ಟಾರ್ ಆಗಿಯೇ ಆಗುತ್ತಾರೆ ಎಂಬ ಶಾಸನವೇನಿಲ್ಲ. ಸೋತ ಎಷ್ಟೊ ಮಕ್ಕಳನ್ನು, ನಾನೇ ನೋಡಿದ್ದೇನೆ. ಹೋದಲ್ಲೆಲ್ಲಾ ಮಕ್ಕಳನ್ನು ಕೊಂಡು ಹೋಗುವ ಅಭ್ಯಾಸವನ್ನು ನಮ್ಮ ಸ್ಟಾರ್ ಗಳು ಕಡಿಮೆ ಮಾಡಿಕೊಳ್ಳಬೇಕು. ಮಕ್ಕಳ ಬೆಳವಣಿಗೆಯಲ್ಲಿ ಈ ರೀತಿಯ ಹಸ್ತಕ್ಷೇಪ ಮಾಡುವುದೂ ಒಂದು ರೀತಿಯಲ್ಲಿ ಅವರ ಬಾಲ್ಯ ಯೌವ್ವನದ ಮೇಲೆ ಮಾಡುವ ಪ್ರಹಾರವೇ.ಪ್ರಪಂಚದಲ್ಲಿ ಎಲ್ಲವೂ ಇದೆ ಮಗಳೇ, ನನ್ನ ಆಯ್ಕೆಯ ಬದುಕು ಇದು, ನಿನ್ನದು ಇದೇ ಆಗಬಹುದು ಅಥವಾ ಬೇರೆಯದಾಗಬಹುದು ಅಂತ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಕರ್ತವ್ಯವೇ. ನಾನು ಓದಿಲ್ಲ, ನೀನು ಮೊದಲು ಓದು. ಅಮೇಲೆ ಸ್ಟಾರಾಗುವ ಯೋಚನೆ ಮಾಡು. ಮುಖ್ಯವಾಗಿ ಸ್ಟಾರ್ ಆಗುವುದಕ್ಕೆ ಒಂದು ಎಕ್ಸ್ ಫ್ಯಾಕ್ಟರ್ ಇರುತ್ತದೆ. ಅದು ಅವರವರ ಅದೃಷ್ಟದ ಪರೀಕ್ಷೆ. ಗೆದ್ದರೂ ಸೋತರೂ ನೀನು ಕುಗ್ಗದೆ ಬದುಕಲ್ಲಿ ಗೆಲ್ಲಬೇಕು ಎಂದೂ ಎಷ್ಟೊ ಸ್ಟಾರ್ ಮಕ್ಕಳಿಗೆ ಹೇಳಬೇಕೆಂದು ನನಗೆ ಮನಸ್ಸಾಗುತ್ತದೆ. "ಸಾಕು ಬೇರೆಯವರ ಉಸಾಬರಿ. ನಿನ್ನ ಕೆಲಸ ನೀನು ನೋಡು. ನಿನ್ನ ಪ್ರಾಕ್ಟಿಕಲ್ ಪಥದರ್ಶನವನ್ನು ಸ್ವೀಕರಿಸುವ ಮನಸ್ಥಿತಿ ಅವರಿಗಿರುವುದಿಲ್ಲ", ಅಂತ ಅವಿನಾಶ್ ಸುಮ್ಮನಾಗಿಸುತ್ತಾರೆ. ಇಷ್ಟಕ್ಕೂ ಕ್ರಿಕೆಟ್ ಸ್ಟಾರ್ಸ್ ಮಕ್ಕಳೇನು ಅವರಂತೆ ಸ್ಟಾರ್ಸಾಗುವುದಿಲ್ಲವಲ್ಲ. ಭಗವಂತ ನಮಗೆ ಅಂತ ಒಂದು ಮಾರ್ಗವನ್ನು ಮುಂಚೆಯೇ ನಿರ್ಧರಿಸುತ್ತಾನೆ'' ಎಂದಿದ್ದಾರೆ. ಇನ್ನೂ ''ತಾಯಿ, ವಿಶ್ವ ಸುಂದರಿ, ಹೋದಲೆಲ್ಲಾ ಆ ಪುಟ್ಟ ಹುಡುಗಿ ಬಾಲಂಗೋಚಿಯಂತೆ...ಒಂದು ಬದಿಯಲ್ಲಿ ಆಕೆಯನ್ನು ತಯಾರು ಮಾಡಿದ ಸ್ಟೈಲಿಸ್ಟ್, ಹೇರ್ ಡ್ರೆಸ್ಸರ್, ಮೇಕಪ್ ಮಾಡಿದವರು, ಮತ್ತೊಂದು ಕಡೆ ಆ ಹುಡುಗಿ...ಇದೆಂತಹ ಅವಸ್ಥೆ. ಆ ಮಗುವಿಗೆ, ಶಾಲೆ, ಓದು ಏನೂ ಇರುವುದಿಲ್ಲವೆ? ಹೀಗೆ ತಾಯಿಯ ಜಗತ್ತೆಲ್ಲ ಜತೆ ತಿರುಗಾಡುತ್ತಾಳಲ್ಲಾ? ತಾಯಿಗೆ ಹಾಗೆ ಉಡುಗೆ ತೊಟ್ಟು ಪೋಸ್ ಕೊಡುವುದು, ಅವಳ ವೃತ್ತಿ! ಈ ಮಗುವಿಗಲ್ಲೇನು ಕೆಲಸ? ಯಾಕೊ ಆ ದೃಶ್ಯವನ್ನು ನೋಡಿ ಬೇಜಾರಾಯಿತು. ನಮ್ಮ ಸ್ವಾರ್ಥಕ್ಕಾಗಿ ಮಕ್ಕಳನ್ನು ನಾವೇ ಬಳಸಿಕೊಂಡುಬಿಡುತ್ತೇವಾ''..? ಎಂದು ಪ್ರಶ್ನೆಯನ್ನು ಕೇಳಿ ತಮ್ಮ ಬರಹ ಮುಗಿಸಿದ್ದಾರೆ ಮಾಳವಿಕಾ ಅವಿನಾಶ್.
Post a comment
Log in to write reviews