ಭೂಮಿಯಲ್ಲಿ ಇರೋ ಪ್ರತಿ ಜೀವಿಗೂ ಅಭೂತಪೂರ್ವ ಶಕ್ತಿಯಿದೆ. ಮಾನವ ಇತರ ಪ್ರಾಣಿಗಳಿಗಿಂತ ವಿಭಿನ್ನವಾಗಿದ್ದಾನೆ. ಕಾರಣ ಮಾನವ ಭಾವನಾಜೀವಿ. ಪ್ರೀತಿ ಪ್ರೇಮ, ಮಮತೆ ವಾತ್ಸಲ್ಯ, ಕರುಣೆಗಳನ್ನ ತನ್ನಲ್ಲಿ ಅಡಗಿಸಿಕೊಂಡಿದ್ದಾನೆ .
ಅದರಲ್ಲೂ ಪ್ರೀತಿ ಎಂಬುದು ಬದುಕಿಗೆ ಸ್ಫೂರ್ತಿ ಎಂದರೆ ತಪ್ಪಾಗಲಾರದು. ಪ್ರೀತಿ ಎಂಬುದು ನಿಂತ ನೀರಲ್ಲ. ಸದಾ ಉತ್ಸಾಹ ತುಂಬುವ ಚಿಲುಮೆ. ಅದೊಂದು ಕಲ್ಪನೆಗೆ ನಿಲುಕದ, ಮಾತಿಗೂ ಸಿಲುಕದ ವಿಶಿಷ್ಟ ಅನುಭವ.
ಬಲ್ಲವನೆ ಬಲ್ಲ ಬೆಲ್ಲದ ರುಚಿಯ ಎಂಬಂತೆ ಪ್ರೀತಿಯ ಸವಿ ಉಂಡವನಿಗೆ ಮಾತ್ರ ಅದರ ಮಹತ್ವ ಅರಿವಿಗೆ ಬರುತ್ತದೆ. ಪ್ರೀತಿ ಎಂಬುದು ಇಂತಿಷ್ಟಕ್ಕೆ ಸೀಮಿತವಾಗಿಲ್ಲ. ಅಪ್ಪ-ಅಮ್ಮನ ಪ್ರೀತಿ, ಅಕ್ಕ -ಅಣ್ಣನ ಪ್ರೀತಿ, ತಮ್ಮ-ತಂಗಿಯ ಪ್ರೀತಿ, ಅಜ್ಜ-ಅಜ್ಜಿಯ ಪ್ರೀತಿ ಹೀಗೆ ಅನೇಕ ರೀತಿಯಾಗಿ ಕಾಣಸಿಗುತ್ತದೆ.
ಇದೆಲ್ಲದಕ್ಕೂ ಮೀರಿತ ಹಾಗೂ ನಮ್ಮಲ್ಲಿ ಮಹಾನ್ ಚೇತನ ತುಂಬುವುದೇ ಸಂಗಾತಿಯ ಪ್ರೀತಿ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ಎರಡು ಹೃದಯಗಳು ಒಂದಕ್ಕೊಂದು ಬೆಸೆದು 2 ದೇಹಗಳು ಒಂದೇ ಎಂದಂತಾಗುವ ಸಂಗಾತಿಯ ಜೊತೆಗಿನ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ.
ಭಾರತದ ಇತಿಹಾಸದ ಪುಟಗಳನ್ನ ತಿರುಗಿಸಿದಂತೆ ನಮಗೆ ಸಾವಿರಾರು, ನವಿರಾರು ಪ್ರೇಮ ಕಥೆಗಳು ಕಾಣ ಸಿಗುತ್ತವೆ. ಈ ಪ್ರೀತಿಯ ಸಂಕೇತವಾಗಿ ಇಂದಿಗೂ ಅನೇಕ ಸ್ಮಾರಕಗಳು ಜೀವಂತ ಸಾಕ್ಷಿಯಾಗಿ ಉಳಿದಿವೆ. ಭಾರತದ ಒಂದೊಂದು ಐತಿಹಾಸಿಕ ಸ್ಮಾರಕದ ಹಿಂದೆಯೂ ಒಂದೊಂದು ಜೀವಂತ ಕಥೆ ಅಡಗಿದೆ.
ಅಂತಹ ಒಂದು ಐತಿಹಾಸಿಕ ಪ್ರೇಮ ಸ್ಮಾರಕದ ಸ್ವಾರಸ್ಯಕರ ನೈಜ ಕಥನವನ್ನ ಈ ಲೇಖನದಲ್ಲಿ ತಿಳಿಯಪಡಿಸುತ್ತಿದ್ದೇನೆ.
ಇವತ್ತು ನಾನು ಹೇಳ ಹೊರಟಿರೋ ನೈಜ ಕಥನ ನಡೆದಿರೋದು ಎಲ್ಲಿ ಅಂತ ನೋಡುವುದಾದರೆ ವಿಜಯಪುರ ಜಿಲ್ಲೆಯಲ್ಲಿ. ಇದು ಒಂದು ವಿಭಿನ್ನ ಪ್ರೇಮಕಥೆ. ಈ ವಿಭಿನ್ನ ಪ್ರೇಮಕಥೆ ಹೇಳ ಹೊರಟಿರೋ ಸ್ಮಾರಕದ ಹೆಸರೇ ಸಾಟ್ ಖಬಾರ್. ಹೆಸರು ಕೇಳಿ ನಿಮಗೆ ಶಾಕ್ ಆಗಿರಬಹುದು. ಈ 60 ಸಮಾಧಿಗಳು ಹೇಗೆ ಪ್ರೇಮ ಕಥೆಯನ್ನ ಸಾರುತ್ತವೆ ಎಂದು. ಹೌದು ಈ 60 ಸಮಾಧಿಗಳ ಹಿಂದೆ ಹೃದಯ ವಿದ್ರಾವಕ ಪ್ರೇಮ ಕಥೆ ಅಡಗಿದೆ.
ವಿಜಯಪುರ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳಲ್ಲಿ ಸಾಟ್ ಖಬಾರ್ ಕೂಡ ಒಂದು . ಮೊಗಲ್ ಸಾಮ್ರಾಜ್ಯದ ಬಲಿಷ್ಠ ಸೇನಾನಿ ಆಗಿದ್ದ ಆಫ್ಜಲ್ ಖಾನ್ ಗೆ ಸೇರಿದ ಸ್ಮಾರಕ ಇದಾಗಿದೆ. ಒಮ್ಮೆ ಮೊಘಲ್ ಹಾಗೂ ಶಿವಾಜಿ ನಡುವೆ ಯುದ್ಧ ಘೋಷಣೆ ಆದ ಸಂದರ್ಭದಲ್ಲಿ ಆಫ್ಜಲ್ ಖಾನ್ ಮೊಘಲ್ ಸೈನ್ಯದ ಸಾರಥ್ಯ ವಹಿಸುವಂತೆ ಔರಂಗಜೇಬ್ ತಿಳಿಸುತ್ತಾನೆ.
ದೃಢಕಾಯನಾದ, ಬಲಿಷ್ಠನಾದ ಆಫ್ಜಲ್ ಖಾನ್ ಗೆ ಒಂದು ದೌರ್ಬಲ್ಯವೆಂದರೆ ಅದುವೇ ಅತಿಯಾದ ಜ್ಯೋತಿಷ್ಯ ನಂಬಿಕೆ. ಈ ಕಾರಣದಿಂದಾಗಿ ಪ್ರತಿಭಾರಿ ಯುದ್ಧ ಘೋಷಣೆ ಆದಾಗ ಜ್ಯೋತಿಷಿಯ ಬಳಿ ಭವಿಷ್ಯವಾಣಿ ಕೇಳುವಂತೆ ಈ ಬಾರಿಯು ಕೇಳಿದಾಗ ಯುದ್ಧದಲ್ಲಿ ಮರಣ ಹೊಂದುವುದಾಗಿ ಭವಿಷ್ಯ ತಿಳಿಯುತ್ತದೆ.
ಇದರಿಂದ ಚಿಂತೆಗೀಡಾದ ಆಫ್ಜಲ್ ಖಾನ್ ನನ್ನ ಮರಣದ ನಂತರ ನನ್ನ 60 ಜನ ಪತ್ನಿಯರು ಬೇರೆ ರಾಜರ ವಶವಾಗುತ್ತಾರೆ ಎಂದು ಭಾವಿಸಿ ಒಂದು ಆಳವಾದ ಭಾವಿ ನಿರ್ಮಿಸಿ 60 ಜನ ಪತ್ನಿಯರನ್ನು ತಳ್ಳಿ ಸಾಯಿಸುತ್ತಾನೆ. ಜೊತೆಗೆ ಎಲ್ಲರನ್ನು ಒಂದೆಡೆ ಸಮಾಧಿ ಮಾಡಿಸಿ ತನಗೂ ಕೂಡ ಅಲ್ಲೆ ಒಂದು ಸಮಾಧಿ ನಿರ್ಮಾಣ ಮಾಡುವಂತೆ ತಿಳಿಸುತ್ತಾನೆ.
ಇನ್ನು ಇದು ಇರುವುದಾದರು ಎಲ್ಲಿ ಅಂತ ನೋಡುವುದಾದರೆ ವಿಜಯಪುರದಿಂದ ಸುಮಾರು 5 ಕಿಮಿ ದೂರದಲ್ಲಿರುವ ನವರಸಪುರದಲ್ಲಿ. ಸಾಟ್ ಖಬರ್ಗೆ ಹೋಗಬೇಕಾದರೆ ನೀವು ಬಿಜಾಪುರದಲ್ಲಿ ಆಟೋ ರಿಕ್ಷಾ ಮೂಲಕ ಹೋಗಬೇಕು. ಹೆಚ್ಚಿನ ಆಟೋಗಳು ಇಲ್ಲಿಗೆ ಬರಲು ಹಿಂಜರಿಯುತ್ತವೆ. ಹಾಗಾಗಿ ನೀವು ಕಾಲ್ನಡಿಗೆಯ ಮೂಲಕ ಸ್ಥಳವನ್ನು ಅನ್ವೇಷಿಸುತ್ತಾ ಸಾಗಬಹುದು.
ಬೇಸರದ ಸಂಗತಿ ಏನೆಂದರೆ ಇಂತಹ ಒಂದು ಐತಿಹಾಸಿಕ ತಾಣ ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ ಎಂಬುದು. ಈ ಪ್ರದೇಶ ಗಿಡ, ಮರಗಳು, ಪೊದೆಗಳಿಂದ ಸುತ್ತುವರಿದೆ. ಇಲ್ಲಿಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಕೂಡಾ ಇಲ್ಲ. ಸಂಪೂರ್ಣವಾಗಿ ಸರ್ಕಾರದ ನಿರ್ಲಕ್ಷಕ್ಕೆ ಒಳಪಟ್ಟಿದೆ. ಒಂದು ವೇಳೆ ನೀವು ಇತಿಹಾಸ ಹಾಗೂ ಐತಿಹಾಸಿಕ ಸ್ಮಾರಕಗಳ ಬಗ್ಗೆ ಆಸಕ್ತಿ ಹೊಂದಿದ್ಲಲ್ಲಿ ಈ ಸ್ಥಳಕ್ಕೆ ಭೇಟಿ ನೀಡಬಹುದು.
ವಿನುತಾ ಹೆಚ್.ಎಲ್ ಡಿಜಿಟಲ್ ಸಮಯ ನ್ಯೂಸ್
Post a comment
Log in to write reviews