ಚಿತ್ರದುರ್ಗ : ಚಿತ್ರದುರ್ಗದ ಮೃತ ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ ಇಂದು ಬೆಳಿಗ್ಗೆ ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ಕುಟುಂಬಸ್ಥರಿಗೆ ವಿನೋದ್ ರಾಜ್ ಸಾಂತ್ವನ ಹೇಳಿ 1 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ.
ಮೃತ ರೇಣುಕಾಸ್ವಾಮಿ ನಿವಾಸಕ್ಕೆ ತೆರಳಿ ಪೋಷಕರಿಗೆ ಮತ್ತು ರೇಣುಕಾಸ್ವಾಮಿ ಪತ್ನಿ ಸಹನಾಗೆ ವಿನೋದ್ ರಾಜ್ ಸಾಂತ್ವನ ಹೇಳಿದ್ದಾರೆ. ಬಳಿಕ ರೇಣುಕಾಸ್ವಾಮಿ ಪತ್ನಿ ಹೆಸರಿಗೆ 1 ಲಕ್ಷ ಚೆಕ್
ಕೊಡುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ.
ರೇಣುಕಾಸ್ವಾಮಿ ಪೋಷಕರು ವಿನೋದ್ ರಾಜ್ ಮುಂದೆ ಕಣ್ಣೀರಿಟ್ಟಿದ್ದು, ನಾವು ಸಂಧಾನಕ್ಕೆ ಮುಂದಾಗಿಲ್ಲ. ನನ್ನ ಮಗನಿಗೆ ನ್ಯಾಯ ಸಿಗಬೇಕು. ಮಗನನ್ನು ಕಳೆದುಕೊಂಡು ನಮ್ಮ ಕರುಳು ಕಿತ್ತು ಬರುತ್ತಿದೆ. ನಾವು ಬಹಳ ನೊಂದಿದ್ದೇವೆ. ನನ್ನ ಮನೆತನ ನಾಶವಾಗಿದೆ ಎಂದು ವಿನೋದ್ ರಾಜ್ ಮುಂದೆ ರೇಣುಕಾ ಫ್ಯಾಮಿಲಿ ನೋವು ತೋಡಿಕೊಂಡಿದೆ.
ರೇಣುಕಾಸ್ವಾಮಿ ಫ್ಯಾಮಿಲಿ ಭೇಟಿ ಬಳಿಕ ನಟ ವಿನೋದ್ ರಾಜ್ ಮಾತನಾಡಿ, ಮಗ ಹೋದಾಗಿಂದ ಕುಟುಂಬಸ್ಥರೆಲ್ಲಾ ನೋವಲ್ಲಿದ್ದಾರೆ. ಅವರಿಗೆ ಸಾಂತ್ವನ ಹೇಳುವ, ಧೈರ್ಯ ತುಂಬುವ ಮಾತನ್ನು ಹೇಳಿದ್ದೇನೆ.
ಇನ್ನು ದರ್ಶನ್ ಇರುವ ಸ್ಥಿತಿ ನೆನೆದು ಚಿತ್ರದುರ್ಗದಲ್ಲೂ ವಿನೋದ್ ರಾಜ್ ಕಣ್ಣೀರು ಹಾಕಿದ್ದಾರೆ. ಜೈಲಿಗೆ ಹೋದಾಗ ದರ್ಶನ್ ನನ್ನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ.
ಆ ಸ್ಥಿತಿಯಲ್ಲಿ ದರ್ಶನ್ ಅವರನ್ನು ನೋಡಲು ನನಗೆ ಆಗಲಿಲ್ಲ ಎಂದು ವಿನೋದ್ ರಾಜ್ ಭಾವುಕರಾಗಿದ್ದಾರೆ.
Post a comment
Log in to write reviews