
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಯವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ಮ ಹಿಟ್ ಬ್ಯಾಕ್ ಎಂದರೇ ಇದೇ ಅಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನೆ ಮಾಡಿದ್ದಾರೆ.
ಮೈಸೂರು ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹಾಗೂ ಜನಪ್ರತಿನಿಧಿಗಳ ನ್ಯಾಯಾಲಯ ಎರಡು ತನಿಖೆಗೆ ಆದೇಶ ನೀಡಿವೆ. ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಯಬೇಕಿದೆ. ಈ ಕೇಸ್ ತನಿಖೆ ಸಿಬಿಐಗೆ ಹೋಗಬಹುದು ಎಂದು ಸಚಿವ ಸಂಪುಟ ಸಿಬಿಐಗಿದ್ದ ಮುಕ್ತ ಅನುಮತಿಯನ್ನು ವಾಪಸ್ ಪಡೆದುಕೊಂಡಿದೆ. ಇದರಿಂದ ರಾಜ್ಯ ಸರ್ಕಾರದ ಅನುಮತಿ ಇಲ್ಲದೇ ಸಿಬಿಐ ಪ್ರವೇಶ ಮಾಡುವಂತಿಲ್ಲ. ಈ ನಿರ್ಧಾರ ಸಂಬಂಧ ಸದ್ಯ ಹೆಚ್.ಡಿ ಕುಮಾರಸ್ವಾಮಿಯವರು ಕಿಡಿ ಕಾರಿದ್ದಾರೆ.
ಈ ಕುರಿತು ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಶೇರ್ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ನಿಮ್ಮ ‘ಸಿದ್ವಿಲಾಸ’ಕ್ಕೆ ಉಘೇ.. ಉಘೇ ಎನ್ನಲೇಬೇಕು. ಅಂದು ಹಗರಣಗಳಿಂದ ಪಾರಾಗಲು ಲೋಕಾಯುಕ್ತಕ್ಕೆ ಸಮಾಧಿ ಕಟ್ಟಿ ಎಸಿಬಿ ರಚನೆ ಮಾಡಿಕೊಂಡಿರಿ. ಇಂದು ಮುಡಾ ಹಗರಣದಿಂದ ಬಚಾವಾಗಲು ನಿಮಗೀಗ ಅದೇ ಲೋಕಾಯುಕ್ತ ಗತಿ! ಕರ್ಮ ಹಿಟ್ ಬ್ಯಾಕ್ ಎಂದರೆ ಇದೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಗ್ರಹಚಾರಕ್ಕೆ ಎಸಿಬಿಯನ್ನೂ ಹೈಕೋರ್ಟ್ ಬರ್ಖಾಸ್ತು ಮಾಡಿಬಿಟ್ಟಿತು. ಈಗ ಲೋಕಾಯುಕ್ತವನ್ನೇ ಗುರಾಣಿ ಮಾಡಿಕೊಂಡು ಸಿಬಿಐ ರಾಜ್ಯ ಪ್ರವೇಶ ಮಾಡದಂತೆ ಸಂಪುಟದಿಂದ ಬಾಗಿಲು ಬಂದ್ ಮಾಡಿಸಿದ್ದೀರಿ. ಅಲ್ಲಿಗೆ ಆರೋಪಿ ಅಪರಾಧಿಯಾದ ಎಂದೇ ಲೆಕ್ಕ. ಸಿದ್ದಾಪರಾದ ಸಾಬೀತಿಗೆ ಇನ್ನೊಂದೇ ಹೆಜ್ಜೆ ಬಾಕಿ. ನಾನು ಭಾವಿಸಿದಷ್ಟು ಧೈರ್ಯವಂತರಲ್ಲ ನೀವು. ನಿಮಗೂ ಭಯವಿದೆ! ಅದೇ ಈ ನೆಲದ ಕಾನೂನಿನ ಶಕ್ತಿ. ಏನಂತೀರಿ ಪ್ರಶ್ನೆ ಮಾಡಿದ್ದಾರೆ.
Poll (Public Option)

Post a comment
Log in to write reviews