ಮೈಸೂರು: ನಾಡಿನ ಜನತೆ ಕಾತರದಿಂದ ಕಾಯುತ್ತಿರುವ ಜಗತ್ಪ್ರಸಿದ್ಧ ಮೈಸೂರು ದಸರಾ ಜಂಬೂ ಸವಾರಿಗೆ ಆರಂಭವಾಗಲಿದ್ದು. ಸಂಜೆ 4 ಗಂಟೆಯಿಂದ 4.30ರ ಒಳಗಿನ ಶುಭ ಕುಂಭಲಗ್ನದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಪ್ರಾರಂಭವಾಗಲಿದೆ. ಮೆರವಣಿಗೆಯಲ್ಲಿ ಹೆಜ್ಜೆಹಾಕಲಿರುವ ಗಜಪಡೆಗೆ ಸಿಂಗಾರ ಮಾಡಲಾಗಿದೆ.
ದಸರಾ ಜಂಬೂ ಸವಾರಿಗೆ ಮುಖ್ಯ ಭಾಗವಾಗಿರುವ ಗಜಪಡೆಗೆ ವಿವಿಧ ಬಣ್ಣಗಳಿಂದ ಚಿತ್ತಾರ ಬರೆದು ಅಲಂಕರಿಸಲಾಗಿದೆ. ಅಭಿಮನ್ಯು ನೇತೃತ್ವದ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಕುಮ್ಕಿ ಅನೆಗಳಿಗೆ ಕಲಾವಿದರಿಂದ ಸಿಂಗಾರ ನಡೆದಿದೆ.
ಮಹೇಂದ್ರ, ಭೀಮ, ರೋಹಿತ್, ಲಕ್ಷ್ಮಿ, ವರಲಕ್ಕ್ಮಿ ಸೇರಿದಂತೆ ಜಂಬೂ ಸವಾರಿಯಲ್ಲಿ ಭಾಗವಹಿಸುವ 9 ಆನೆಗಳಲ್ಲಿ 8 ಆನೆಗಳಿಗೆ ಬಣ್ಣಗಳ ಮೂಲಕ ಸಿಂಗಾರ ಮಾಡಲಾಗಿದೆ. ಇದರಲ್ಲಿ, ನಾಯಕ ಆಭಿಮನ್ಯುಗೆ 3D ಬಣ್ಣ ಹಚ್ಚುವ ಸಲುವಾಗಿ ಕೊನೆಗೆ ಹಾಕಲಾಗುತ್ತದೆ. ವಿವಿಧ ಹೂವಿನ ಚಿತ್ರಗಳು ಮತ್ತು ಗಂಡಭೇರುಂಡ ಲಾಂಛನವನ್ನು ಬಣ್ಣಗಳಿಂದ ಚಿತ್ರಿಸಲಾಗಿದೆ.
ವಿಜಯದಶಮಿ ಸಂಭ್ರಮ: ಬೆಳಗ್ಗೆ 9.45ಕ್ಕೆ ವಿಜಯದಶಮಿ ಪೂಜಾ ವಿಧಾನಗಳು ಆರಂಭವಾಗಲಿವೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನೊಂದಿಗೆ ದೇವರನ್ನು ಅರಮನೆಗೆ ಕರೆತರಲಾಗುತ್ತದೆ. ಬೆಳಗ್ಗೆ 10.15ಕ್ಕೆ ಉತ್ತರ ಪೂಜೆಯ ಬಳಿಕ ಆನೆ ಬಾಗಿಲಿನ ಮುಂಭಾಗದಲ್ಲಿ ಜಟ್ಟಿ ಕಾಳಗ ನಡೆಯಲಿದೆ. 11.20ರಿಂದ 11.45ರವರೆಗೆ ಆನೆ ಬಾಗಿಲಿನ ಮೂಲಕ ವಿಜಯಯಾತ್ರೆ ಹೊರಡುವ ಕನ್ನಡಾಂಬೆ ದೇವಾಲಯದ ಒಳಭಾಗದಲ್ಲಿರುವ ಬನ್ನಿ ಮರಕ್ಕೆ ರಾಜವಂಶಸ್ಥರಾದ ಯದುವೀರ್ ಒಡೆಯರ್ ಪೂಜೆ ಸಲ್ಲಿಸುವರು. ಇದಾದ ಬಳಿಕ ರಾಜವಂಶಸ್ಥರು ಮನೆಗೆ ಮರಳುವುದರೊಂದಿಗೆ ನವರಾತ್ರಿಯ 10 ದಿನಗಳ ಧಾರ್ಮಿಕ ಕಾರ್ಯಗಳು ಪೂರ್ಣಗೊಳ್ಳಲಿವೆ.
ಮೆರವಣಿಗೆಗೆ ಚಾಲನೆ: ಮಧ್ಯಾಹ್ನ 1.44ರಿಂದ 2.10ರ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಕೋಟೆ ಆಂಜನೇಯ ದೇವಾಲಯದ ಬಳಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಗಣ್ಯರು ಪೂಜೆ ಸಲ್ಲಿಸಿದ ಬಳಿಕ ವಿಜಯದಶಮಿ ಮೆರವಣಿಗೆಗೆ ಚಾಲನೆ ದೊರೆಯಲಿದೆ. ಆ ಬಳಿಕ ನಾಡಿನ ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಬಿಂಬಿಸುವ ಸುಮಾರು 51 ಸ್ತಬ್ಧಚಿತ್ರಗಳು ಹಾಗೂ ಕಲಾ ತಂಡಗಳ ಮೆರವಣಿಗೆ ಜರುಗಲಿದೆ.
ಜಂಬೂ ಸವಾರಿ: ಸಂಜೆ 4 ಗಂಟೆಯಿಂದ 4.30ರೊಳಗಿನ ಶುಭ ಕುಂಭಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಇತರ ಗಣ್ಯರು 750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿರುವ ಸರ್ವಾಲಂಕಾರಭೂಷಿತೆ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುತ್ತಾರೆ. ಇದರೊಂದಿಗೆ ದಸರಾ ಜಂಬೂ ಸವಾರಿ ಆರಂಭವಾಗಲಿದೆ. ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಆನೆಯೊಂದಿಗೆ ಗಜಪಡೆ ಅರಮನೆಯಿಂದ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ.ಗೂ ಹೆಚ್ಚು ದೂರ ಸಾಗಿ ಬರಲಿದೆ. ಮೆರವಣಿಗೆಯಲ್ಲಿ ಆಕರ್ಷಕ ಸ್ತಬ್ದಚಿತ್ರಗಳು, ಕಲಾತಂಡಗಳ ಜೊತೆಗೆ ಕರ್ನಾಟಕ ಪೊಲೀಸ್ ವಾದ್ಯ ತಂಡ, ಅಶ್ವದಳ, ಎನ್ಸಿಸಿ, ಕೆಎಸ್ಆರ್ಪಿ ತುಕಡಿಗಳು ಇರಲಿವೆ.
Post a comment
Log in to write reviews