ಉತ್ತರ ಭಾರತದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿಯೇ ರಾಜ್ಯದ ಕಾವೇರಿ ನದಿಗೆ ಕಾವೇರಿ ಆರತಿ ನಡೆಸಲು ಸರ್ಕಾರ ಮುಂದಾಗಿದ್ದು, ದಸರಾ ವೇಳೆಗೆ ಆರಂಭಿಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಅಧ್ಯಯನ ನಡೆಸಲು ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಹರಿದ್ವಾರ ಮತ್ತು ವಾರಾಣಾಸಿಗೆ ಭೇಟಿ ನೀಡಿದೆ. ನಿನ್ನೆ ಹರಿದ್ವಾರಕ್ಕೆ ತೆರಳಿರುವ ನಿಯೋಗ ವಿಶೇಷ ಗಂಗಾರತಿಯಲ್ಲಿ ಭಾಗಿಯಾಗಿ ಪೂಜೆ ನಡೆಸಿತು ಮತ್ತು ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಜೊತೆ ಮಾತುಕತೆ ನಡೆಸಿ, ಹಲವು ಅನುಮಾನಗಳಿಗೆ ಸ್ಪಷ್ಟನೆ ಪಡೆದುಕೊಂಡಿತು. ಗಂಗಾರತಿ ವೀಕ್ಷಣೆ ಜತೆಗೆ ಪೂಜೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, ‘ಕಾವೇರಿ ಆರತಿಗೆ ಎರಡು, ಮೂರು ಸ್ಥಳಗಳನ್ನು ಗುರುತಿಸಲಾಗಿದೆ. ಅಂತಿಮಗೊಂಡ ಸ್ಥಳದಲ್ಲಿ ಆರತಿಗಾಗಿ ಸೋಪಾನೆ ಕಟ್ಟೆ ನಿರ್ಮಿಸಲಾಗುವುದು. ಹರಿದ್ವಾರದಲ್ಲಿ ನಿತ್ಯ ಗಂಗಾ ಆರತಿ ನಡೆಯುತ್ತಿದೆ. ರಾಜ್ಯದಲ್ಲಿ ವಾರದಲ್ಲಿ ಎರಡು ಅಥವಾ ಮೂರು ದಿನ ಆರತಿ ಮಾಡಬೇಕೆ? ನಿತ್ಯ ಆರತಿ ನಡೆಸಬೇಕೇ ಎಂಬುದರ ಬಗ್ಗೆ ಸಮಿತಿ ಜತೆ ಚರ್ಚಿಸಿ ನಿರ್ಧರಿಸಲಾಗುವುದು. ಆರಂಭದಲ್ಲಿ ಹರಿದ್ವಾರ ಮತ್ತು ವಾರಾಣಸಿಯ ಸಾಧು, ಸಂತರನ್ನು ಆಹ್ವಾನಿಸಿ ಅವರಿಂದ ಕಾವೇರಿ ಆರತಿ ನಡೆಸಲಾಗುತ್ತದೆ ಎಂದು ಹೇಳಿದರು.
Post a comment
Log in to write reviews