
ಕುಂದಾಪುರ: ಸಂಜೆಯ ವೇಳೆ ಬೀಸಿದ ಸುಂಟರಗಾಳಿಯ ಪರಿಣಾಮದಿಂದ ಮರ ಬಿದ್ದ ರಸ್ತೆ ಬದಿಯಲ್ಲಿ ಕಟ್ಟಿದ್ದ ದನ ಹಾಗೂ ಅದನ್ನು ಬಿಡಿಸಲು ಹೋಗಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ಭಾನುವಾರ ಕೆಂಚನೂರು ಗ್ರಾಮದಲ್ಲಿ ನಡೆದಿದೆ.
ಕೆಂಚನೂರು ಗ್ರಾಮದ ನೀರಿನ ಟ್ಯಾಂಕ್ ಬಳಿಯ ಮಲ್ಲಾರಿ ನಿವಾಸಿ ಅಣ್ಣಪ್ಪಯ್ಯ ಆಚಾರಿ ಎಂಬುವರ ಪತ್ನಿ ಸುಜಾತ ಆಚಾರ್ತಿ (53) ಮೃತ ದುರ್ದೈವಿ.
ಸುಜಾತ ಭಾನುವಾರ ಸಂಜೆ 5.30 ಕ್ಕೆ ಮನೆ ಸಮೀಪದ ರಸ್ತೆ ಬದಿಯಲ್ಲಿ ಮೇಯಲು ಕಟ್ಟಿದ್ದ ದನವನ್ನು ಬಿಡಿಸಿ ಕೊಟ್ಟಿಗೆಗೆ ತರಲೆಂದು ಹೋಗಿದ್ದರು. ಈ ವೇಳೆ ಭಾರೀ ಸುಂಟರಗಾಳಿ ಬೀಸಿದ ಕಾರಣದಿಂದ ಉರುಳಿ ಬಿದ್ದ ಮರ ದನ ಹಾಗೂ ಸುಜಾತ ಆಚಾರ್ತಿ ಅವರ ಮೇಲೆ ಬಿದ್ದಿದೆ. ಮರ ಬಿದ್ದ ಪರಿಣಾಮದಿಂದ ದನ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಸುಜಾತ ಅವರು ಗಂಭೀರವಾಗಿ ಗಾಯಗೊಂಡಿದ್ದ ತಕ್ಷಣ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಮರದ ಅಡಿಭಾಗದಲ್ಲಿ ಸಿಲುಕಿ ಸಾವನ್ನಪ್ಪಿರುವ ದನವನ್ನು ಸ್ಥಳೀಯ ಯುವಕರ ತಂಡ ಹರಸಾಹಸಪಟ್ಟು ಹೊರತೆಗೆದಿದ್ದು ಮಣ್ಣು ಮಾಡುವಲ್ಲಿ ಸಹಕರಿಸಿದರು. ಮರದಡಿ ಸಿಲುಕಿದ್ದ ಸುಜಾತ ಅವರನ್ನು ಹೊರತೆಗೆಯಲು ಸರಿಸುಮಾರು 15 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿದರೂ ಸಾಧ್ಯವಾಗಲಿಲ್ಲ. ಬಳಿಕ ಜೆಸಿಬಿ ಯ ಮೂಲಕ ಮರ ತೆರವುಗೊಳಿಸಿ ಗಾಯಾಳು ಸುಜಾತ ಅವರನ್ನು ಆಸ್ಪತ್ರೆಗೆ ಸಾಗಿಸುವ ಯತ್ನ ನಡೆಸಲಾಯಿತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಸ್ಥಳೀಯ ಯುವಕರಾದ ಅನಿಲ್, ನವೀನ, ಸುಮಂತ್ ನೆಂಪು, ನಿತಿನ್, ಪ್ರವೀಣ, ಮಂಜುನಾಥ ಮತ್ತು ಅಮಿತ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ದುರಂತದಲ್ಲಿ ಸಾವನ್ನಪ್ಪಿರುವ ಸುಜಾತಾ ಆಚಾರ್ಯ ಅವರ ಪತಿ ಅಣ್ಣಪ್ಪಯ್ಯ ಆಚಾರಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಮೃತರಿಗೆ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯನ್ನು ಇದ್ದಾರೆ. ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Poll (Public Option)

Post a comment
Log in to write reviews