
ನಡು ರಸ್ತೆಯಲ್ಲಿ ರೀಲ್ಸ್ ವಯ್ಯಾರ ಮಾಡ್ತಿದ್ದ ಯುವತಿ. ಬೈಕಲ್ಲಿ ಬಂದವ ಕ್ಷಣಾರ್ಧದಲ್ಲಿ ಚಿನ್ನದ ಸರ ಎಗರಿಸಿಕೊಂಡುಹೋದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ರಸ್ತೆ ಮಧ್ಯೆ ತಮ್ಮ ಮೊಬೈಲ್‌ನಲ್ಲಿ ರೀಲ್ಸ್ ಶೂಟ್ ಮಾಡುತ್ತಾ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಸಾಗಿದ್ದಾರೆ. ಆಕೆ ನಿಧಾನವಾಗಿ ಕ್ಯಾಮರಾ ಬಳಿ ಬರುತ್ತಿದ್ದಂತೆ ಬೈಕ್ ಸವಾರನೊಬ್ಬ ಬಂದು ಆ ಮಹಿಳೆಯ ಕತ್ತಿನಲ್ಲಿದ್ದ ಸರ ಕಿತ್ತುಕೊಂಡು ಬೈಕಲ್ಲಿ ಪರಾರಿಯಾಗಿದ್ದಾನೆ. ವಿಡಿಯೋ ನೋಡಿದಾಗ ಅದು ರೀಲ್ಸ್ ಭಾಗವಾಗಿ ಕಂಡುಬಂದಿದೆ, ಆದರೆ ಮಹಿಳೆ ಭಯದಿಂದ ಕಿರುಚಿಕೊಂಡಿರುವುದನ್ನು ನೋಡಿದರೆ ಇದು ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಎಂದು ತಿಳಿದುಬಂದಿದೆ.
ಹೆಲ್ಮೆಟ್ ಹಾಕಿಕೊಂಡು ಬೈಕ್ ನಲ್ಲಿ ಬಂದ ದುಷ್ಕರ್ಮಿ ಸೀದಾ ಮಹಿಳೆಯ ಸಮೀಪಕ್ಕೆ ಬಂದು ಕತ್ತಿನಲ್ಲಿದ್ದ ಮಂಗಳಸೂತ್ರ ಚಿನ್ನದ ಸರವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಹಗಲು ವೇಳೆಯೇ ರಸ್ತೆಯಲ್ಲಿ ಚೈನ್ ಸ್ನ್ಯಾಚ್ ಮಾಡುವ ಈ ಘಟನೆ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆ ಎಬ್ಬಿಸಿದೆ, ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದರ ಪರಿವೆಯೇ ಇಲ್ಲದ ರೀತಿಯಲ್ಲಿ ರೀಲ್‌ಗಳಲ್ಲಿ ನಿರತರಾಗಿದ್ದಾರೆ ಎಂದು ಕೆಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Poll (Public Option)

Post a comment
Log in to write reviews