ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಡ್ಯೂಟಿ ಮಾಡುತ್ತಿದ್ದ ಟೋಲ್ ಕಂಪನಿ ಅಧಿಕಾರಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅಪಘಾತಕ್ಕೆ ಒಳಗಾದ ಮಂಜುನಾಥ (47) ಮೃತಪಟ್ಟಿದ್ದಾರೆ. ರಾಜಣ್ಣ (45), ಸಂದೀಪ (25) ಎಂಬುವವರಿಗೆ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಎಲಿವೇಟೆಡ್ ಟೋಲ್ ಲಿಮಿಟೆಡ್ ಕಂಪನಿಯಲ್ಲಿ ಮಂಜುನಾಥ ರೂಟ್ ಪೆಟ್ರೋಲಿಂಗ್ ಆಫೀಸರ್ ಆಗಿದ್ದರು. ರಾಜಣ್ಣ ಸಹಾಯಕ ಸಿಬ್ಬಂದಿಯಾಗಿದ್ದರು. ಎಲಿವೇಟೆಡ್ ಕಾರಿಡಾರ್‌ನ ಕೂಡ್ಲುಗೇಟ್-ಸಿಂಗಸಂದ್ರ ನಡುವೆ ಕಾರೊಂದು ಕೆಟ್ಟು ನಿಂತಿತ್ತು. ಈ ಹಿನ್ನೆಲೆಯಲ್ಲಿ ಮಂಜುನಾಥ ಅವರು ಸಿಬ್ಬಂದಿ ರಾಜಣ್ಣ, ಸತೀಶ ಜತೆ ಸ್ಥಳಕ್ಕೆ ತೆರಳಿದ್ದರು. ಟೋಯಿಂಗ್ ಮಾಡುವ ವೇಳೆ ಕೆಟ್ಟು ನಿಂತ ಕಾರಿನ ಸುತ್ತ ಬ್ಯಾರಿಕೇಡ್, ಬ್ಲಿಂಕರ್‌ಗಳನ್ನು ಹಾಕಲಾಗಿತ್ತು. ಕಾರಿನ ಮುಂಭಾಗ ಮಂಜುನಾಥ ನಿಂತಿದ್ದರೆ, ರಾಜಣ್ಣ ಹಿಂಬದಿ ನಿಂತು ಇತರೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದ್ದರು.
ಈ ವೇಳೆ ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ ವೇಗವಾಗಿ ಬಂದ ಟಾಟಾ ಏಸ್ ಗೂಡ್ಸ್ ವಾಹನ ಚಾಲಕ ಮೊದಲು ಬ್ಯಾರಿಕೇಡ್‌ಗಳಿಗೆ ಗುದ್ದಿದ್ದು, ಬಳಿಕ ಮಂಜುನಾಥ ಅವರಿಗೆ ಡಿಕ್ಕಿ ಹೊಡೆದಿದ್ದ ಪರಿಣಾಮ ರಸ್ತೆ ಮೇಲೆ ಉರುಳಿಬಿದ್ದ ಮಂಜುನಾಥ ದೇಹದ ಮೇಲೆ ವಾಹನದ ಚಕ್ರಗಳು ಹರಿದಿವೆ. ಅದೇ ರಭಸದಲ್ಲಿ ಕಾರಿಗೂ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ಬಳಿಕ ಟಾಟಾ ಏಸ್ ವಾಹನದ ಚಾಲಕ ಸಂದೀಪ ಕೂಡ ಗಾಯಗೊಂಡು ವಾಹನ ನಿಲ್ಲಿಸಿದ್ದಾನೆ. ಅಪಘಾತ ಕಂಡ ತಕ್ಷಣ ಸ್ಥಳದಲ್ಲಿದ್ದವರು ಕೂಡಲೇ ಗಾಯಾಳುಗಳಾದ ಮಂಜುನಾಥ ಸೇರಿ ಮೂವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಎದೆ, ಹೊಟ್ಟೆ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಮಾರ್ಗ ಮಧ್ಯೆ ಮಂಜುನಾಥ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ರಾಜಣ್ಣ ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತವೆಸಗಿದ ಚಾಲಕ ಸಂದೀಪನ ಕೈ ಮುರಿದಿದ್ದು, ಹೊಟ್ಟೆಗೂ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮದ್ಯ ಸೇವಿಸಿ ವಾಹನ ಚಲಾಯಿಸಿರುವ ಶಂಕೆಯಿದೆ ಎನ್ನಲಾಗಿದೆ. ವೈದ್ಯಕೀಯ ವರದಿ ಬಂದ ಬಳಿಕ ಈ ಬಗ್ಗೆ ಖಚಿತತೆ ಸಿಗಲಿದೆ. ಹುಳಿಮಾವು ಸಂಚಾರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Post a comment
Log in to write reviews