
ನವದೆಹಲಿ: ನಾಲ್ಕನೇ ಮಗುವೂ ಹೆಣ್ಣಾಯಿತು ಎಂದು ಹೆತ್ತ ತಾಯಿಯೇ ತನ್ನ ಆರು ದಿನದ ಹೆಣ್ಣು ಮಗುವನ್ನು ಕೊಂದು ಶವವನ್ನು ಪಕ್ಕದ ಮನೆಯ ಛಾವಣಿಯ ಮೇಲೆ ಎಸೆದಿರುವ ಘಟನೆ ಪಶ್ಚಿಮ ದೆಹಲಿಯ ಖಯಾಲಾ ಪ್ರದೇಶದಲ್ಲಿ ನಡೆದಿದೆ.
ಬಳಿಕ ಶುಕ್ರವಾರ ಬೆಳಗ್ಗೆ ಪಿಸಿಆರ್ ಕರೆ ಮಾಡಿದ ಮಹಿಳೆ, ತನ್ನ ಆರು ದಿನದ ಹೆಣ್ಣು ಮಗು ನಾಪತ್ತೆಯಾಗಿದೆ ಎಂದು ದೂರಿದ್ದಾಳೆ. ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿದ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಹೋಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ವಿಚಿತ್ರ ವೀರ್ ಅವರು ತಿಳಿಸಿದ್ದಾರೆ.
ಶೋಧದ ವೇಳೆ ಪಕ್ಕದ ಮನೆಯ ಛಾವಣಿ ಮೇಲೆ ಬ್ಯಾಗ್ ವೊಂದು ಪತ್ತೆಯಾಗಿದ್ದು, ಅದರಲ್ಲಿ ಮಗು ಇರುವುದು ಕಂಡು ಬಂದಿತ್ತು. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಮಗು ಅಸುನೀಗಿತ್ತು ಎಂದು ವೀರ್ ತಿಳಿಸಿದ್ದಾರೆ.
ತಾಯಿಯ ನಡೆ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರ ತಂಡವೊಂದು ಶಿವಾನಿ ಅವರನ್ನು ತೀವ್ರ ತಪಾಸಣೆಗೆ ಒಳಪಡಿಸಿದಾಗ ಕೃತ್ಯವನ್ನು ತಾಯಿಯೇ ಎಸಗಿರುವುದು ಬಹಿರಂಗಗೊಂಡಿದೆ.
ಮೃತಪಟ್ಟಿರುವ ಮಗುವು ತನ್ನ ನಾಲ್ಕನೇ ಮಗುವಾಗಿದ್ದು, ಈಗಾಗಲೇ ಎರಡು ಕೂಸುಗಳು ಸಾವನ್ನಪ್ಪಿವೆ. ಸಾಮಾಜಿಕ ಕಳಂಕದ ಕಾರಣದಿಂದ ಈ ಕೃತ್ಯ ಎಸಗಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ.
ಮಗುವಿಗೆ ಹಾಲು ಕುಡಿಸುವಾಗ ಶಿವಾನಿ ಮಗುವನ್ನು ಸಾಯಿಸಿ, ಪಕ್ಕದ ಮನೆಯ ಛಾವಣಿ ಮೇಲೆ ಎಸೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Poll (Public Option)

Post a comment
Log in to write reviews