ಅಮರಾವತಿ: ತಿರುಪತಿ ಲಡ್ಡು ವಿವಾದವನ್ನು ಹುಟ್ಟುಹಾಕುವ ಮೂಲಕ ತಮ್ಮ 100 ದಿನಗಳ ಆಡಳಿತದಲ್ಲಿ ಆಗಿರುವ ದೌರ್ಜನ್ಯವನ್ನು ಮುಚ್ಚಿಹಾಕಲು ಸಿಎಂ ಚಂದ್ರಬಾಬು ನಾಯ್ಡು ಅವರು ಡೈವರ್ಟ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವೆ ರೋಜಾ ಅವರು ಗಂಭೀರ ಆರೋಪ ಮಾಡಿದ್ದಾರೆ.
ಪ್ರವಾಹ ಪರಿಸ್ಥಿತಿ, ಮಹಿಳೆಯರ ಮೇಲೆ ನಿರಂತರ ಹಲ್ಲೆ, ವೈಸಿಪಿ ನಾಯಕರ ಮೇಲೆ ಹಲ್ಲೆ ಹಾಗೂ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಿಎಂ ಚಂದ್ರಬಾಬು ನಾಯ್ಡು ಅವರಿಂದ ಸಾಧ್ಯವಾಗಿಲ್ಲ. ಇಷ್ಟೆಲ್ಲಾ ತಪ್ಪು ಮಾಡಿರುವ ಚಂದ್ರಬಾಬು, ಜನರ ಗಮನವನ್ನು ಬೇರೆಡೆ ಸೆಳೆಯಲು ತಿರುಪತಿ ಲಡ್ಡು ವಿವಾದವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಆರೋಪಿಸಿದರು.
ಚಂದ್ರಬಾಬು ನಾಯ್ಡು ತಮ್ಮ ರಾಜಕೀಯ ಲಾಭಕ್ಕಾಗಿ ವೆಂಕಟೇಶ್ವರ ಸ್ವಾಮಿಯನ್ನು ಬಿಡುತ್ತಿಲ್ಲ. ಪ್ರತಿ ಬಾರಿ ಇಂತಹ ವಿವಾದಗಳು ಮುನ್ನೆಲೆಗೆ ಬಂದಾಗ ತಮ್ಮ ಪಕ್ಷದ ಮುಖಂಡರ ಜತೆಗೂಡಿ ಪ್ರಚಾರ ನಡೆಸುತ್ತಿದ್ದಾರೆ. ಟಿಟಿಡಿ ಸ್ವಯಂ ಆಡಳಿತ ಸಂಸ್ಥೆಯಾಗಿದ್ದು, ಸಿಎಂಗೂ ಇದಕ್ಕೂ ಸಂಬಂಧವಿಲ್ಲ ಎಂದು ಸಚಿವ ಲೋಕೇಶ್ ಅವರೇ ಹೇಳಿದ್ದಾರೆ. ಆದರೆ, ಮಾಜಿ ಸಿಎಂ ಜಗನ್ ಪ್ರಾಣಿಗಳ ಕೊಬ್ಬನ್ನು ಬೆರೆಸಿದ್ದಾರೆ ಎಂದು ಚಂದ್ರಬಾಬು ನಾಯ್ಡು ಅವರು ಹೊಸ ಕತೆಯನ್ನು ಸೃಷ್ಟಿಸುತ್ತಿದ್ದಾರೆ. ಈ ಆರೋಪಗಳು ಸಮಂಜಸವಲ್ಲ. ಇಒ ಶ್ಯಾಮಲಾರಾವ್ ಅವರು ಅಧಿಕಾರ ವಹಿಸಿಕೊಂಡ ತಕ್ಷಣ ಶುದ್ಧ ತುಪ್ಪ ಬಳಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಸರಕಾರ ಸುಳ್ಳು ಆರೋಪ ಮಾಡುತ್ತಿದೆ ಎಂದು ಹೇಳಿದರು.
Post a comment
Log in to write reviews