ಹದಗೆಟ್ಟ ರಸ್ತೆ: ಮಂಚವನ್ನೇ ಡೋಲಿಯನ್ನಾಗಿಸಿ ತುಂಬು ಗರ್ಭಿಣಿಯನ್ನು 2 ಕಿ.ಮೀ ಹೊತ್ತು ಸಾಗಿದ ಕುಟುಂಬ
ಚಾರ್ಲ(ತೆಲಂಗಾಣ): ರಸ್ತೆ ಹದಗೆಟ್ಟು ವಾಹನ ಸಂಚರಿಸಲಾಗದೇ, ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಕುಟುಂಬದವರು ಮಲಗುವ ಮಂಚವನ್ನೇ ಡೋಲಿಯನ್ನಾಗಿಸಿ ಅದರಲ್ಲಿ ಹೊತ್ತು ಸಾಗಿಸಿದ ಘಟನೆ ನಡೆದಿದೆ. ಇದು ನಡೆದಿರುವುದು ತೆಲಂಗಾಣದ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಚಾರ್ಲ್ ಮಂಡಲದ ಬೂರುಗಪಾಡು ಗ್ರಾಮದ ಬುಡಕಟ್ಟು ಪ್ರದೇಶದಲ್ಲಿ.
ಬುಧವಾರ ಬೆಳಗ್ಗೆ ಗರ್ಭಿಣಿ ರವ್ವಾ ಉಂಗಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಂಬ್ಯುಲೆನ್ಸ್ಗೆ ಕರೆ ಮಾಡಿದರು, ಬುಡಕಟ್ಟು ಪ್ರದೇಶವನ್ನು ತಲುಪುವ ರಸ್ತೆ ಹದಗೆಟ್ಟಿದ್ದ ಕಾರಣ ವಾಹನ ಆರ್.ಕೊತ್ತಗುಡ್ಡೆ- ಚಿಂತಗುಪ್ಪಾ ಮುಖ್ಯರಸ್ತೆವರೆಗೆ ಮಾತ್ರ ತಲುಪಲು ಸಾಧ್ಯವಾಯಿತು. ಅಲ್ಲಿಂದ ಬೂರುಗಪಾಡುವರೆಗೆ ರಸ್ತೆ ಕೆಸರುಮಯವಾಗಿದ್ದ ಕಾರಣ ಮುಂದೆ ಚಲಿಸಲು ಅಸಾಧ್ಯವಾಗಿತ್ತು. ಹಾಗಾಗಿ ಭಾರೀ ಮಳೆಯ ನಡುವೆಯೇ ಉಂಗಿ ಅವರ ಕುಟುಂಬದ ಸದಸ್ಯರು, ಆಂಬ್ಯುಲೆನ್ಸ್ ಇರುವಲ್ಲಿಯವರೆಗೆ, ಮಲಗುವ ಮಂಚವನ್ನೇ ಡೋಲಿ ರೀತಿಯಲ್ಲಿ ಮಾಡಿ, ಅದರಲ್ಲಿ ಗರ್ಭಿಣಿಯನ್ನು ಮಲಗಿಸಿ ಗ್ರಾಮದಿಂದ 2 ಕಿ.ಮೀ. ಹೊತ್ತೊಯ್ದಿದ್ದಾರೆ.
ನಂತರ ಉಂಗಿ ಅವರನ್ನು ಸತ್ಯನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಅಲ್ಲಿ ಅವರು ಅವಳಿ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಜನ್ಮ ನೀಡಿದರು. ಈ ಘಟನೆ ಮತ್ತೊಮ್ಮೆ ಬುಡಕಟ್ಟು ಪ್ರದೇಶದಲ್ಲಿರುವ ಮೂಲಸೌಕರ್ಯ ಸುಧಾರಣೆಯ ತುರ್ತು ಅಗತ್ಯತೆಯ ಬಗ್ಗೆ ರಾಜಕೀಯ ನಾಯಕರು ಹಾಗೂ ಸರ್ಕಾರಿ ಅಧಿಕಾರಿಗಳ ಕಿವಿ ಚುಚ್ಚಿದಂತಾಗಿದೆ.
Post a comment
Log in to write reviews