ಬೆಂಗಳೂರು: ಬಿಬಿಎಂಪಿ ಮೈದಾನದ ಗೇಟ್ ಬಿದ್ದು 7 ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.
ಜಯಕುಮಾರ್ ಮತ್ತು ಪ್ರಿಯಾ ದಂಪತಿಯ ಮಗುವಾದ ನಿರಂಜನ್ ಎಂಬ ಮಗು ಸಾವನ್ನಪ್ಪಿದೆ. ಭಾನುವಾರ ಸಂಜೆ ಮಗು ನಿರಂಜನ್ ಆಟ ಆಡಲು ಮೈದಾನದ ಗೇಟ್ ಓಪನ್ ಮಾಡುತ್ತಿದ್ದಂತೆ ಮಗುವಿನ ಮೇಲೆಯೇ ಗೇಟ್ ಬಿದ್ದಿದೆ. ಈ ವೇಳೆ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಕೂಡಲೇ ಸ್ಥಳೀಯರು ಮಗುವನ್ನು ಕೆ ಸಿ ಜನರಲ್ ಆಸ್ಪತ್ರೆ ಕರೆದುಕೊಂಡು ಹೋಗಿದ್ದಾರೆ. ಆದರೆ, ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಮಗು ಕೊನೆಯುಸಿರೆಳೆದಿದೆ. ಇನ್ನು ಘಟನೆ ಬಳಿಕ ಸ್ಥಳಕ್ಕೆ ಮಲ್ಲೇಶ್ವರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಿಬಿಎಂಪಿ ಮೈದಾನದ ಗೇಟ್ ಬಿದ್ದು ಮಗು ಸಾವು ಕೇಸ್ಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಅವರು ಪ್ರತಿಕ್ರಿಯಿಸಿ ಘಟನೆಯಿಂದ ನನಗೆ ಬಹಳ ನೋವಾಗಿದೆ. ಈ ಬಗ್ಗೆ ತನಿಖೆ ಮಾಡುತ್ತೇವೆ. ಗೇಟ್ ಹಾಳಾದ ಬಗ್ಗೆ ಯಾರೂ ಕಂಪ್ಲೇಂಟ್ ಕೊಟ್ಟಿಲ್ಲ. ಇದುವರೆಗೂ ಈ ಬಗ್ಗೆ ನಮ್ಮ ಗಮನಕ್ಕಂತೂ ಬಂದಿಲ್ಲ. 4 ವರ್ಷದ ಹಿಂದೆ ಮೈದಾನಕ್ಕೆ ಗೇಟ್ ಅಳವಡಿಸಲಾಗಿದೆ. ಸಂಬಂಧಪಟ್ಟವರಿಂದ ವರದಿ ತರಿಸಿಕೊಳುತ್ತೇವೆ. ಯಾರಿಂದ ಲೋಪ ಆಗಿದೆ ಎಂಬ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಮಧ್ಯೆ ಸಾವನ್ನಪ್ಪಿದ ಬಾಲಕನ ನೇತ್ರದಾನಕ್ಕೆ ಪೋಷಕರು ಮುಂದಾಗಿದ್ದು, ಪುತ್ರನ ಸಾವಿನ ನೋವಿನಲ್ಲೂ ಪೋಷಕರು ಮಾನವೀಯತೆ ಮೆರೆದಿದ್ದಾರೆ. ಮೃತ ನಿರಂಜನ್ ಕಣ್ಣುಗಳನ್ನು ಲಯನ್ಸ್ ಇಂಟರ್‌ನ್ಯಾಷನಲ್ ಐ ಬ್ಯಾಂಕ್‌ಗೆ ದಾನ ಮಾಡಲು ಆತನ ತಂದೆ ವಿಜಯ್ ಪವಾರ್ ಮುಂದಾಗಿದ್ದಾರೆ.
Post a comment
Log in to write reviews