ಭಾರೀ ಗುಡ್ಡ ಕುಸಿತದಿಂದ 9 ಮಂದಿ ದುರ್ಮರಣ.? ನದಿಯಲ್ಲಿ ತೇಲಿ ಹೋದ ಟ್ಯಾಂಕರ್ ! ನದಿ ತೀರದ ಜನರ ಬದುಕು ಅತಂತ್ರ
ಉತ್ತರ ಕನ್ನಡ: ಭಾರೀ ಮಳೆಗೆ ಜಿಲ್ಲೆಯ ಅಂಕೋಲ-ಕುಮಟಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದಿದ್ದು ಚಲಿಸುತ್ತಿದ್ದ ಕಾರು ಮಣ್ಣಡಿ ಸಿಲುಕಿ ಒಂದೇ ಕುಟುಂಬದ ಐವರು ಮಣ್ಣಿನಲ್ಲಿ ಸಿಲುಕಿರುವ ದಾರುಣ ಘಟನೆ ಅಂಕೋಲಾ ತಾಲೂಕಿನ ಶಿರೂರು ಬೊಮ್ಮಯ್ಯ ದೇವಸ್ಥಾನದ ಬಳಿ ನಡೆದಿದೆ.
ಇನ್ನು ಇದೇ ವೇಳೆ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಗುಡ್ಡ ಕುಸಿತದ ರಭಸಕ್ಕೆ ಪಕ್ಕದಲ್ಲಿ ಹರಿಯುತ್ತಿದ್ದ ಗಂಗಾವಳಿ ನದಿಗೆ ಉರುಳಿ ಬಿದ್ದು ನದಿಯಲ್ಲಿ ತೇಲಿ ಹೋಗಿದೆ. ಡ್ರೈವರ್ ಮತ್ತು ಕ್ಲೀನರ್ ಇಬ್ಬರು ನಾಪತ್ತೆಯಾಗಿದ್ದು, ಒಟ್ಟು ಗುಡ್ಡ ಕುಸಿತ ದುರಂತಕ್ಕೆ 9 ಮಂದಿ ಸಾವನ್ನಪ್ಪಿದ್ದಾರೆಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಒಂದೇ ಕುಟುಂಬದ 47 ವರ್ಷದ ಲಕ್ಷಣ್ ನಾಯ್ಕ, 36 ವರ್ಷದ ಶಾಂತಿ ನಾಯ್ಕ, 11 ವರ್ಷದ ರೋಶನ್, 6 ವರ್ಷದ ಅವಾಂತಿಕಾ, 55 ವರ್ಷದ ಜಗನ್ನಾಥ ಕಾರಿನಲ್ಲೇ ಮಣ್ಣಿನಡಿ ಸಿಲುಕಿ ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ.
ಒಮ್ಮೆಲೆ ಗುಡ್ಡ ಕುಸಿದು ಮಣ್ಣು ನದಿಯಲ್ಲಿ ಜೋರಾಗಿ ಜರಿದ ಪರಿಣಾಮ ಗಂಗಾವಳಿ ನದಿ ಪಾತ್ರದ ಆಚೆ ದಡದ ಮನೆಯೂ ಕೊಚ್ಚಿಹೋಗಿದೆ ಎನ್ನಲಾಗಿದೆ.
ಗುಡ್ಡ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದಾಗಿದ್ದು, ಹೆದ್ದಾರಿ ಎರಡು ಕಡೆ ವಾಹನಗಳು ಸಾಲುಮಟ್ಟಿ ನಿಂತಿವೆ. ಗುಡ್ಡ ಕುಸಿತದಿಂದ ಪ್ರಾಣ ಹಾನಿ ಮತ್ತಿತರ ಹಾನಿಯಾಗಿರುವ ಸಾಧ್ಯತೆ ಇದ್ದು ಹೆಚ್ಚಿನ ವಿವರ ತಿಳಿದು ಬರಬೇಕಿದೆ.
ಪೊಲೀಸ್, ಅಗ್ನಿ ಶಾಮಕ, ಎನ್‌ಹೆಚ್ ಎಐ ಸುರಕ್ಷತಾ ಅಂಬುಲೆನ್ಸ್ ತಂಡಗಳು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಶಾಸಕ ಸತೀಶ್ ಸೈಲ್ ವಿಷಯ ತಿಳಿದು, ಕೂಡಲೆ ಘಟನೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿ, ಮಧ್ಯಾಹ್ನದೊಳಗೆ ಅಂಕೋಲಾಕ್ಕೆ ಬರುವುದಾಗಿ ತಿಳಿಸಿದ್ದಾರೆ. ಮತ್ತಷ್ಟು ಗುಡ್ಡ ಕುಸಿವ ಭೀತಿ ಇರುವುದರಿಂದ ಸಂಬಂಧಿತ ಅಧಿಕಾರಿಗಳಿಗೆ ಫೋನ್ ಕರೆಯ ಮೂಲಕ ಮಾತನಾಡಿ, ಸ್ಥಳೀಯರ ಹಾಗೂ ಹೆದ್ದಾರಿ ಸಂಚಾರಿಗಳ ಸುರಕ್ಷತೆಗೆ ಒತ್ತು ನೀಡುವಂತೆ ತಿಳಿಸಿದ್ದಾರೆ.
Post a comment
Log in to write reviews