ನವದೆಹಲಿ: ಇಂದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಧ್ಜಜಾರೋಹಣ(Independence Day 2024) ನೆರವೇರಿಸಿದ ಬಳಿಕ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ದೇಶದಲ್ಲಿ ಅಸಮಾನತೆಯನ್ನು ತೊಡೆದುಹಾಕಲು ಜಾತ್ಯಾತೀತ ನಾಗರಿಕ ಕಾನೂನು(Secular civil code) ಜಾರಿಯಾಗಬೇಕಿದೆ ಎಂದು (Narendra Modi) ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಚರ್ಚೆ ನಡೆಸಿದೆ, ಹಲವು ಬಾರಿ ಆದೇಶಗಳನ್ನು ನೀಡಿದೆ. ದೇಶದ ಬಹುಪಾಲು ವರ್ಗವು ಇದರ ಬಗ್ಗೆ ಅತೀವ ನಂಬಿಕೆ ಹೊಂದಿದೆ. ಇಲ್ಲಿವರೆಗೆ ಇದ್ದ ಕೋಮು ನಾಗರಿಕ ಸಂಹಿತೆಯಿಂದ ಮುಕ್ತವಾಗಿ ದೇಶದಲ್ಲಿ ಸೆಕ್ಯುಲರ್ ಸಿವಿಲ್ ಕೋಡ್ ಜಾರಿಯಾಗುವುದು ಅಗತ್ಯವಿದೆ. ಆಗ ಮಾತ್ರ ನಾವು ಧರ್ಮದ ಆಧಾರದ ತಾರತಮ್ಯದಿಂದ ಮುಕ್ತರಾಗುತ್ತೇವೆ ಎಂದರು.
ಬಾಂಗ್ಲಾ ಹಿಂಸಾಚಾರದ ಬಗ್ಗೆಯೂ ಪ್ರಸ್ತಾಪ
ಇದೇ ವೇಳೆ ಅವರು ಕಳೆದ ಕೆಲವು ತಿಂಗಳಿಂದ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿದರು. ಬಾಂಗ್ಲಾದೇಶದ ಶೀಘ್ರದಲ್ಲೇ ಸಹಜ ಸ್ಥಿತಿ ಬರುತ್ತದೆ ಎಂಬ ಭರವಸೆ ಇದೆ. ಅದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಭಾರತ ನೀಡಲಿದೆ ಎಂದು ಹೇಳಿದರು.
ಇನ್ನು ಇದೇ ವೇಳೆ ಒಲಿಂಪಿಕ್ಸ್ ಕ್ರೀಟಾಪಟುಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಹಾರುವಂತೆ ಮಾಡಿದ ಯುವಕರೂ ನಮ್ಮೊಂದಿಗಿದ್ದಾರೆ. 140 ಕೋಟಿ ದೇಶವಾಸಿಗಳ ಪರವಾಗಿ ನಾನು ನಮ್ಮ ಎಲ್ಲಾ ಕ್ರೀಡಾಪಟುಗಳು ಮತ್ತು ಆಟಗಾರರನ್ನು ಅಭಿನಂದಿಸುತ್ತೇನೆ ಎಂದರು.
ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಕೋಲ್ಕತ್ತಾದಲ್ಲಿ ನಡೆದಿರುವ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮಾತೆ ಸಹೋದರಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪಾಪಿಗಳನ್ನು ಗಲ್ಲಿಗೇರಿಸಬೇಕು. ಆಗ ಮಾತ್ರ ಜನರಲ್ಲಿ ಅಪರಾಧಗಳ ಬಗ್ಗೆ ಭಯ ಮೂಡಲು ಸಾಧ್ಯ. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಬಹಳ ಉಗ್ರವಾಗಿ ಧ್ವನಿ ಎತ್ತಬೇಕಿದೆ. ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರನ್ನು ವಿಳಂಬ ಮಾಡದೆ ಶಿಕ್ಷಿಸಬೇಕು ಎಂದರು.
ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಸತತ 11ನೇ ಭಾಷಣ ಮಾಡುತ್ತಿದ್ದಾರೆ. ಈ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಯ ಥೀಮ್ 'ವಿಕಸಿತ್ ಭಾರತ್ @ 2047' ಆಗಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ದೇಶವನ್ನು ಮುನ್ನಡೆಸುವ ಗುರಿ ಹೊಂದಲಾಗಿದೆ. ಪ್ರಧಾನಿ ಮೋದಿಯವರನ್ನು ಹಿರಿಯ ಸರ್ಕಾರ ಮತ್ತು ಸೇನಾ ಅಧಿಕಾರಿಗಳು ಬರಮಾಡಿಕೊಳ್ಳುವುದರೊಂದಿಗೆ ಸಮಾರಂಭ ಪ್ರಾರಂಭವಾಗಿದೆ. ಬಳಿಕ ಸೇನಾ ಗೌರವ ವಂದನೆ ಸ್ವೀಕಾರ ನಡೆಯಿತು. ಈ ವರ್ಷ ಭಾರತೀಯ ನೌಕಾಪಡೆಯು ಇದರ ನೇತೃತ್ವ ವಹಿಸಿದೆ. ಪ್ರಧಾನಿ ಮೋದಿಯವರ ಕರೆ ಮೇರೆಗೆ ಈ ಸಲವೂ ಕೂಡ ಹರ್ ಘರ್ ತಿರಂಗ ಅಭಿಯಾನ ನಡೆದಿದೆ. ನಾಗರಿಕರಲ್ಲಿ ದೇಶಭಕ್ತಿಯ ಮನೋಭಾವವನ್ನು ತುಂಬುವಲ್ಲಿ ಯಶಸ್ವಿಯಾಗಿದೆ. ಸ್ವಾತಂತ್ರ್ಯ ಸ್ವಾತಂತ್ರ್ಯೋತ್ಸವ ಆಚರಣೆಗೆ ಎಲ್ಲ ಭಾರತೀಯರು 'ಹರ್ ಘರ್ ತಿರಂಗ' ಅಭಿಯಾನದಲ್ಲಿ ಭಾಗವಹಿಸುವಂತೆ ಜುಲೈ 28ರಂದು ನಡೆದ 112ನೇ 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದ್ದರು.
Post a comment
Log in to write reviews