ಕರ್ನಾಟಕ
ಜಮೀನು ದಾರಿ ವಿಚಾರಕ್ಕೆ ಜಗಳ, ಗುಂಡು ಹಾರಿಸಿದ ವ್ಯಕ್ತಿಗೆ 5 ವರ್ಷ ಜೈಲೂಟ 50 ಸಾವಿರ ರೂ ದಂಡ

ಶಿವಮೊಗ್ಗ: ಜಮೀನಿಗೆ ಹೋಗುವ ಜಾಗದ ವಿಚಾರಕ್ಕೆ ಜಗಳವಾಗಿ ಗುಂಡು ಹಾರಿಸಿದ ವ್ಯಕ್ತಿಗೆ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿದೆ. ತೀರ್ಥಹಳ್ಳಿ ತಾಲೂಕು ಜಟ್ಟಿನಮಕ್ಕಿ ಗ್ರಾಮದ ಅಶೋಕ್ ಶಿಕ್ಷೆಗೊಳಗಾಗಿದ್ದು, ಈತ 2018ರಲ್ಲಿ ತಮ್ಮ ಗ್ರಾಮದ ಕೃಷ್ಣಮೂರ್ತಿ ಎಂಬವರ ಮೇಲೆ ಕೋವಿಯಿಂದ ಗುಂಡು ಹಾರಿಸಿದ್ದನು. ಗುಂಡು ಕೃಷ್ಣಮೂರ್ತಿ ಕುತ್ತಿಗೆಗೆ ತಾಗಿ ಅವರು ಗಾಯಗೊಂಡಿದ್ದರು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ಅಂದಿನ ತನಿಖಾಧಿಕಾರಿ ಸುರೇಶ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮಂಜುನಾಥ್ ನಾಯಕ್ ಅವರು ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿ 5 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ ಗಾಯಾಳು ಕೃಷ್ಣಮೂರ್ತಿಗೆ 25 ಸಾವಿರ ರೂ ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಸುರೇಶ್ ಕುಮಾರ್ ವಾದ ಮಂಡಿಸಿದ್ದರು.
Poll (Public Option)

Post a comment
Log in to write reviews