
ಚೆನ್ನೈ: ಕಾರಿನಲ್ಲಿ ಒಂದೇ ಕುಟುಂಬದ 5 ಜನ ಶವವಾಗಿ ಪತ್ತೆಯಾಗಿರುವ ಘಟನೆ ತಮಿಳುನಾಡಿನ ಪುದುಕೊಟ್ಟೈನಲ್ಲಿ ನಡೆದಿದೆ.
ತಿರುಚ್ಚಿ-ಕಾರೈಕುಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಕಾರು ನಿಂತಿತ್ತು. ಅದೇ ಸ್ಥಳದಲ್ಲಿ ಸಂಜೆಯಾದರೂ ಕಾರು ನಿಂತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಕಾರಿನೊಳಗೆ 5 ಜನ ಮೃತಪಟ್ಟಿರುವುದು ಕಂಡುಬಂದಿದೆ.
ಮೃತರನ್ನು ಉದ್ಯಮಿ ಮಣಿಕಂದನ್ (50), ಅವರ ಪತ್ನಿ ನಿತ್ಯ, ತಾಯಿ ಸರೋಜಾ ಮತ್ತು ಅವರ ಇಬ್ಬರು ಮಕ್ಕಳು ಸೇಲಂ ನಿವಾಸಿಗಳು ಎಂದು ಗುರುತಿಸಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವಿಷ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.
ಘಟನೆಗೆ ಕಾರಣವೇನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಮೃತ ಮಣಿಕಂದನ್ ಲೋಹದ ವ್ಯಾಪಾರ ಮಾಡುತ್ತಿದ್ದು, ಸಾಲ ಮಾಡಿಕೊಂಡಿದ್ದರು ಎಂದು ವರದಿಗಳು ತಿಳಿಸಿವೆ. ಕುಟುಂಬಸ್ಥರು ಸಾಲಗಾರರ ಒತ್ತಡಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪುದುಕೊಟ್ಟೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗಿದೆ.
Poll (Public Option)

Post a comment
Log in to write reviews