
ಆಂಧ್ರ ಪ್ರದೇಶ: ಹಾಸ್ಟೆಲ್ ತಿಂಡಿಯನ್ನು ತಿಂದು 35 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ಸರ್ಕಾರಿ ಹಾಸ್ಟೆಲ್‌ನಲ್ಲಿ ನಡೆದಿದೆ.
ರಾಮಯಂ ಪೇಟೆಯ ಟಿಜಿ ಮಾಡೆಲ್ ಸ್ಕೂಲ್‌ನ ವಿದ್ಯಾರ್ಥಿಗಳು ಬೆಳಗ್ಗೆ ತಿಂಡಿ ತಿಂದ ಬಳಿಕ ಅಸ್ವಸ್ಥರಾಗಿದ್ದು ವಾಂತಿ, ಬೇಧಿ ಕಾಣಿಸಿಕೊಂಡಿದೆ. ಕೂಡಲೇ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಿರ್ಲಕ್ಷ್ಯದ ಆರೋಪದ ಮೇಲೆ ಅಡುಗೆಯವರು ಮತ್ತು ಸಹಾಯಕ ಅಡುಗೆಯವರನ್ನು ವಜಾಗೊಳಿಸಿ, ಹಾಸ್ಟೆಲ್‌ನ ಉಸ್ತುವಾರಿ ಮತ್ತು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಮೇದಕ್ ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಕೂಡಲೇ ಸ್ಪಂದಿಸಿದ ಶಾಲಾ ಅಧಿಕಾರಿಗಳು ವೈದ್ಯಕೀಯ ನೆರವು ನೀಡಿ ವಿದ್ಯಾರ್ಥಿಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಪ್ರಾಥಮಿಕ ವರದಿಗಳ ಪ್ರಕಾರ ಆಹಾರವನ್ನು ತಯಾರಿಸುವ ಸಮಯದಲ್ಲಿ ಹಲ್ಲಿ ಆಕಸ್ಮಿಕವಾಗಿ ಬಿದ್ದಿರಬಹುದು ಎಂದು ಹೇಳಲಾಗುತ್ತಿದೆ.
ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಸಲ್ಲಿಸಿದ ವರದಿಯಲ್ಲಿ ವಿದ್ಯಾರ್ಥಿಗಳಿಗೆ ಬೆಳಗ್ಗೆ ಉಪ್ಪಿಟ್ಟು ನೀಡಲಾಗಿತ್ತು, ಅದರಲ್ಲಿ ಹಲ್ಲಿ ಇರುವುದನ್ನು ವಿದ್ಯಾರ್ಥಿಗಳು ಕಂಡಿದ್ದಾರೆ ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ.
ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಲಾ ಆಡಳಿತ ಮಂಡಳಿ ಭರವಸೆ ನೀಡಿ, ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಆದೇಶಿಸಿದೆ.
Poll (Public Option)

Post a comment
Log in to write reviews