ಮೈಸೂರು: ಎಲ್ಲರ ಪಾಲಿಗೆ ಬೆಳಕಾಗಬೇಕಿರುವ ವಿದ್ಯುತ್ ಹಲವರ ಪಾಲಿಗೆ ಮೃತ್ಯುಕೂಪವಾಗಿದೆ. ಜಾಗೃತಿ ಕೊರತೆ ಅಥವಾ ನಿರ್ಲಕ್ಷ್ಯದಿಂದ ವಿದ್ಯುತ್ ಅವಘಡಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚುತ್ತಿದೆ. ಜನರೊಂದಿಗೆ ಜಾನುವಾರು ಸಾವು ಹೆಚ್ಚಾಗುತ್ತಿರುವುದು ಆತಂಕದ ವಿಷಯ.
ವಿದ್ಯುತ್ ಅವಘಡದ ಬಗ್ಗೆ ಜನ ಸಾಮಾನ್ಯರಲ್ಲಿ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸವನ್ನು ಸೆಸ್ಕ್ (ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ) ಮಾಡುತ್ತಿದ್ದರೂ ವಿದ್ಯುತ್ ಅವಘಡದಿಂದ ಮೃತಪಟ್ಟವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.
ಕಳೆದ ಐದು ವರ್ಷಗಳಲ್ಲಿ ವಿದ್ಯುತ್ ಅವಘಡದಿಂದ ಬರೋಬ್ಬರಿ 250 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 19 ಮಂದಿ ಸೆಸ್ಕ್ ನೌಕರರೇ ಎಂಬುದು ವಿಪರ್ಯಾಸ. ಇದರೊಂದಿಗೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ 413 ಜಾನುವಾರುಗಳು ಕರೆಂಟ್ ಹೊಡೆದು ಮೃತಪಟ್ಟಿವೆ. ಸಾಕಷ್ಟು ವಿದ್ಯುತ್ ಅವಘಡ ಪ್ರಕರಣಗಳಲ್ಲಿ ಸೆಸ್ಕ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುವಂತಾಗಿದೆ. ಇಲಾಖೆ ನೀಡುವ ಅಲ್ಪ ಪರಿಹಾರಕ್ಕೆ ಅವರ ಕುಟುಂಬ ಕಚೇರಿಗೆ ಅಲೆಯುವುದು ಸಾಮಾನ್ಯವಾಗಿದೆ.
ಹಳೆಯ ವಿದ್ಯುತ್ ಕಂಬಗಳು, ನೇತಾಡುವ ವಿದ್ಯುತ್ ತಂತಿಗಳು, ಭಾರಿ ಮಳೆ, ಗಾಳಿಯಿಂದಾಗಿ ಕಂಬಗಳು ಬಾಗಿರುವುದು, ವಿದ್ಯುತ್ ಮಾರ್ಗಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳದೆ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವ ವೇಳೆ ವಿದ್ಯುತ್ ಅವಘಡಗಳು ಸಂಭವಿಸಿ ಸಾವು-ನೋವು ಹೆಚ್ಚಾಗಿದೆ.
ವಿದ್ಯುತ್ ಅವಘಡದಿಂದ ಮನುಷ್ಯ ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯವಾದರೆ 5 ಲಕ್ಷ ರೂ. ಪರಿಹಾರ, ಭಾಗಶಃ ವೈಕಲ್ಯತೆಗೆ ಕನಿಷ್ಠ 1 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಪರಿಹಾರ ಸಿಗಲಿದೆ ಎನ್ನುತ್ತಾರೆ.
ವಿದ್ಯುತ್ ಅವಘಡಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸೆಸ್ಕ್ ಮಾಡುತ್ತಿದೆ. ಈ ಮೂಲಕ ವಿದ್ಯುತ್ ಅವಘಡ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
ವಿದ್ಯುತ್ ದಿನ ಬಳಕೆಯಲ್ಲಿ ಅತ್ಯಂತ ಪ್ರಮುಖವಾಗಿದ್ದು, ನಿರ್ಲಕ್ಷ್ಯದಿಂದ ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಕೈಗಾರಿಕೆಗಳಲ್ಲಿಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಅವಘಡ ತಡೆಯುವ ಬಗ್ಗೆ ಸೆಸ್ಕ್ ಅಕಾರಿಗಳು ಮತ್ತು ಸಿಬ್ಬಂದಿ ಕ್ರಮವಹಿಸಬೇಕು.
Post a comment
Log in to write reviews