ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲು ವಿಧೇಯಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದ ಐಟಿ ವಲಯ ಇದೀಗ, ರಾಜ್ಯ ಸರ್ಕಾರದ ಮುಂದೆ ವಿವಾದಾತ್ಮಕ ಪ್ರಸ್ತಾವನೆಯೊಂದನ್ನು ಮಂಡಿಸಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ.
ಹೌದು, ಕೆಲ ಐಟಿ ಕಂಪನಿಗಳು ರಾಜ್ಯ ಸರ್ಕಾರದ ಮುಂದೆ ದಿನಕ್ಕೆ ಒಂಬತ್ತು ತಾಸು ಕೆಲಸ ಮಾಡುವ ಬದಲಿಗೆ 12ರಿಂದ 14 ಗಂಟೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂಬ ಬೇಡಿಕೆಯೊಂದನ್ನು ಇಟ್ಟಿದೆ. ಕಂಪನಿಯ ಪ್ರಾಡಕ್ಟಿವಿಟಿ ಹೆಚ್ಚಿಸಲು ಈ ಕ್ರಮಕ್ಕೆ ಮುಂದಾಗಿದ್ದೇವೆ. ಆದ್ದರಿಂದ ಕಾರ್ಮಿಕ ಇಲಾಖೆಯಲ್ಲಿನ ನಿಯಮ ಸಡಿಲಿಕೆ ಮಾಡಬೇಕು ಎನ್ನುವ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಸ್ತಾಪನೆಗೆ ಐಟಿ ಉದ್ಯೋಗಿಗಳು ವಿರೋಧಿಸಿದ್ದು, ಸರ್ಕಾರದ ಮಟ್ಟದಲ್ಲಿಯೂ ಕೆಲ ಹಿರಿಯ ಅಧಿಕಾರಿಗಳು ಹಾಗೂ ಸಚಿವರು ವಿರೋಧಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ನಡೆದಿರುವ ಚರ್ಚೆಯಲ್ಲಿ ಸಾಧಕ-ಬಾಧಕದ ಬಗ್ಗೆ ಚರ್ಚಿಸಿದ್ದು, ಇನ್ನೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರೋಗ್ಯದ ಮೇಲೆ ಅಡ್ಡ ಪರಿಣಾಮ:
ಐಟಿ ಕಂಪನಿಗಳ ಪ್ರಸ್ತಾಪಕ್ಕೆ ಐಟಿ ಉದ್ಯೋಗಿಗಳು ವಿರೋಧಿಸಿದ್ದು, ಈಗಾಗಲೇ ಐಟಿ ಉದ್ಯೋಗಿಗಳು ಒತ್ತಡದಿಂದ ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ವೇಳೆ 14 ಗಂಟೆ ಕೆಲಸದ ಅವಧಿಗೆ ಒಪ್ಪಿಗೆ ನೀಡಿದರೆ ಉದ್ಯೋಗಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಲಿದೆ. 'ಈಗಾಗಲೇ ಶೇ.45ರಷ್ಟು ಐಟಿ ಉದ್ಯೋಗಿಗಳು ಒತ್ತಡದ ಕಾರಣ ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದಾರೆ. ಶೇ.55ರಷ್ಟು ಉದ್ಯೋಗಿಗಳು ದೈಹಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಒಂಬತ್ತು ಗಂಟೆ ಎನ್ನುವ ನಿಯಮವಿದ್ದರೂ, ಅನೇಕ ಕಂಪನಿಗಳು ಈಗಾಗಲೇ 10 ಗಂಟೆಗೂ ಹೆಚ್ಚು ಕಾಲ ದುಡಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ 12 ಗಂಟೆಗಳ ಕಾಲ ಅವಕಾಶ ನೀಡಿದರೆ, ಇಡೀ ದಿನ ಕಚೇರಿಯಲ್ಲಿಯೇ ಇರುವಂತೆ ಸೂಚಿಸುವ ಸಾಧ್ಯತೆಯಿದೆ. ಆಗ ಆರೋಗ್ಯ ಇನ್ನಷ್ಟು ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Post a comment
Log in to write reviews