ಕೊಡಗಿನಲ್ಲಿ ಗುಡ್ಡ ಕುಸಿತ ತಡೆ ಕ್ರಮಕ್ಕೆ 100 ಕೋಟಿ ರೂ. ಸಿಎಂ ಮಂಜೂರು : ಕೃಷ್ಣಭೈರೇಗೌಡ
ಕೊಡಗು: ಮಡಕೇರಿಯ ಸುತ್ತ ಮುತ್ತಲಿನ ಗುಡ್ಡ ಕುಸಿಯುವ ಪ್ರದೇಶಗಳಲ್ಲಿ ಅಗತ್ಯ ಕಾರ್ಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ 100 ಕೋಟಿ ರೂ. ಮಂಜೂರು ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಅತ್ತೂರು ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಕೊಡಗು ಜಿಲ್ಲೆಯಲ್ಲಿ ಗುಡ್ಡ ಕುಸಿಯುವ ಪ್ರದೇಶವನ್ನು ಜಿಎಸ್‌ಐ ತಾಂತ್ರಿಕ ಸಂಸ್ಥೆ ಅಧ್ಯಯನ ಮಾಡಿ ವರದಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಹಣ ಬಿಡುಗಡೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಸಹ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಸರ್ಕಾರ ಜಿಲ್ಲಾಡಳಿತದ ಜೊತೆ ಸದಾ ಸ್ಪಂದಿಸಿದೆ ಎಂದು ಸಚಿವರು ಹೇಳಿದರು.
ಮಲೆನಾಡು ಪ್ರದೇಶದಲ್ಲಿ ಗುಡ್ಡ ಕುಸಿಯುವುದನ್ನು ತಡೆಯುವ ಅಗತ್ಯ ಮುನ್ನೆಚ್ಚರ ಕ್ರಮಗಳನ್ನು ಕೈಗೊಳ್ಳಲು 300 ಕೋಟಿ ರು. ಬಿಡುಗಡೆಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದು, ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಿದರು. ಹವಾಮಾನ ವೈಪರಿತ್ಯದಿಂದ ಅತಿವೃಷ್ಟಿ ಉಂಟಾಗಿದ್ದು, ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಆದ್ದರಿಂದ ಆಗಸ್ಟ್ ತಿಂಗಳಲ್ಲಿಯೂ ಹೆಚ್ಚಿನ ಮುನ್ನೆಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸಿವಿಲ್ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
Post a comment
Log in to write reviews